ರಾಷ್ಟ್ರೀಯ ಮತದಾರರ ದಿನ: ಚುನಾವಣಾ ಆಯೋಗದ ಸ್ವಾಯುತ್ತತೆ, ವೃತ್ತಿಪರತೆ ಬಗ್ಗೆ ಜೈರಾಮ್ ರಮೇಶ್ ಕಳವಳ

Update: 2025-01-25 12:12 IST
Photo of Jairam Ramesh

ಜೈರಾಮ್ ರಮೇಶ್ (Photo: PTI)

  • whatsapp icon

ಹೊಸದಿಲ್ಲಿ : ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಭಾರತದ ಚುನಾವಣಾ ಆಯೋಗದ ಸ್ವಾಯುತ್ತತೆ ಮತ್ತು ವೃತ್ತಿಪರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಇತ್ತೀಚಿನ ಆರೋಪಗಳ ಕುರಿತು ಚುನಾವಣಾ ಆಯೋಗದ ನಿಲುವನ್ನು ಜೈರಾಮ್ ರಮೇಶ್ ಟೀಕಿಸಿದ್ದು, ಈ ಬೆಳವಣಿಗೆ ಪಕ್ಷಪಾತೀಯವಾಗಿದೆ ಎಂದು ಹೇಳಿದ್ದಾರೆ.

ದುಃಖದ ಸಂಗತಿಯೆಂದರೆ ಚುನಾವಣಾ ಆಯೋಗದ ಸ್ವಾಯುತ್ತತೆ ಮತ್ತು ವೃತ್ತಿಪರತೆ ಪ್ರಧಾನಿ ಮತ್ತು ಗೃಹ ಸಚಿವರ ಜೊತೆ ರಾಜಿ ಮಾಡಿಕೊಂಡಿದೆ. ಚುನಾವಣಾ ಆಯೋಗದ ಕೆಲವು ನಿರ್ಧಾರಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಕುರಿತು ಎದ್ದಿರುವ ಕಳವಳಗಳ ಬಗ್ಗೆ ಚುನಾವಣಾ ಆಯೋಗದ ನಿಲುವು ಆಘಾತಕಾರಿಯಾಗಿದೆ ಮತ್ತು ಪಕ್ಷಪಾತೀಯವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು(ಇವಿಎಂ) ತಿರುಚಲಾಗಿದೆ ಎಂಬ ಕಾಂಗ್ರೆಸ್ ಆರೋಪಗಳನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇತ್ತೀಚೆಗೆ ತಳ್ಳಿಹಾಕಿದ್ದರು.

ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೆಚ್ಚಿನ ಯುವ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News