‘ಮೈಯ್ಯಾನ್ ಸಮ್ಮಾನ್ ಯೋಜನೆ’ಗೆ ಚಾಲನೆ ನೀಡಿದ ಜಾರ್ಖಂಡ್ ಸಿಎಂ
ಹೊಸದಿಲ್ಲಿ: ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸೋಮವಾರ ನಮ್ಕುಮ್ ನಲ್ಲಿ ಆಯೋಜಿಸಲಾಗಿದ್ದ ‘ಮೈಯಾನ್ ಸಮ್ಮಾನ್ ಯೋಜನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ, 56.61 ಲಕ್ಷ ಮಹಿಳಾ ಫಲಾನುಭವಿಗಳಿಗೆ ಎರಡು ತಿಂಗಳ ಆರ್ಥಿಕ ನೆರವಾದ 5,000 ರೂ. ಅನ್ನು ವರ್ಗಾಯಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಫಲಾನುಭವಿಗಳ ಖಾತೆಗಳಿಗೆ 1,415.44 ಕೋಟಿ ರೂ. ಮೊತ್ತದ ಆರ್ಥಿಕ ನೆರವನ್ನು ಅವರು ವರ್ಗಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೇಮಂತ್ ಸೊರೇನ್, “ನಾವು ಹೊಸ ಎತ್ತರವನ್ನು ಮುಟ್ಟಲು ಸಿದ್ಧವಾಗಿದ್ದೇವೆ. ದಶಕಗಳ ಕಾಲ ದುರ್ಬಳಕೆಗೆ ಗುರಿಯಾಗಿದ್ದ ರಾಜ್ಯವೀಗ ಹೊಸ ಎತ್ತರಕ್ಕೆ ಹಾರಲು ಸಿದ್ಧವಾಗಿದೆ” ಎಂದು ಹೇಳಿದರು.
ಈ ಕಾರ್ಯಕ್ರಮ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನಿಗದಿಯಾಗಿತ್ತಾದರೂ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ರಾಷ್ಟ್ರೀಯ ಶೋಕಾಚರಣೆ ಘೋಷಣೆಯಾಗಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಈ ಯೋಜನೆಯನ್ನು ಮೊದಲಿಗೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿ 18-50 ವರ್ಷ ವಯೋಮಾನದೊಳಗಿನ ಸುಮಾರು 56 ಲಕ್ಷ ಮಹಿಳೆಯರಿಗೆ ತಲಾ 1,000 ರೂ. ಆರ್ಥಿಕ ನೆರವು ಒದಗಿಸಲಾಗಿತ್ತು. ನಂತರ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ನೆರವನ್ನು 2,500 ರೂ.ಗೆ ಏರಿಕೆ ಮಾಡುವುದಾಗಿ ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಪಕ್ಷ ಭರವಸೆ ನೀಡಿತ್ತು.
ಈ ಕುರಿತು ರವಿವಾರ ಪ್ರಕಟಣೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸಾಲಬಾಧಿತ ಬಡತನದಿಂದ ಅಸಮರ್ಪಕ ಹೊರೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ನೆರವು ನೀಡುವ ಈ ಯೋಜನೆಯು ದಿಟ್ಟ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ. ಆರ್ಥಿಕ ಸ್ವಾತಂತ್ರ್ಯದಲ್ಲಿ ಮೈಯಾನ್ ಸಮ್ಮಾನ್ ಯೋಜನೆ ಹೊಸ ಅಧ್ಯಾಯ ಬರೆಯುತ್ತಿದ್ದರೂ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.