VHP ಕಾರ್ಯಕ್ರಮದಲ್ಲಿ ಮುಸ್ಲಿಮರ ಕುರಿತು ನ್ಯಾಯಮೂರ್ತಿ ಶೇಖರ್ ಯಾದವ್ ವಿವಾದಾತ್ಮಕ ಹೇಳಿಕೆ: ವರದಿ ಕೇಳಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ವಿಶ್ವ ಹಿಂದೂ ಪರಿಷತ್ತಿನ ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಮರ ಕುರಿತು ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಅಲಹಾಬಾದ್ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ವರದಿಯನ್ನು ಕೇಳಿದೆ.
ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಭಾರತವು ದೇಶವು ತನ್ನ ಬಹುಸಂಖ್ಯಾತ ಜನರ ಇಚ್ಛೆಯಂತೆ ನಡೆಯುತ್ತದೆ’, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಸಾಂವಿಧಾನಿಕ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದರು.
ನ್ಯಾಯಾಧೀಶರು ತನ್ನ ಭಾಷಣದಲ್ಲಿ ʼಮತಾಂಧರುʼ ಎಂಬ ಪದವನ್ನು ಬಳಸಿದ್ದಾರೆ. ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ತನ್ನ ಭಾಷಣದಲ್ಲಿ ಮುಸ್ಲಿಂ ಸಮುದಾಯದ ಪ್ರಾಣಿ ಬಲಿ ಕೊಡುವುದು ಸೇರಿದಂತೆ ಕೆಲವು ಆಚರಣೆಗಳನ್ನು ಟೀಕಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಭಾಷಣವು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಈ ಕುರಿತು ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (CJAR) ಸಂಸ್ಥೆ ಭಾರತದ ಮುಖ್ಯ ನ್ಯಾಯಾಧೀಶರಿಗೆ ದೂರುಗಳನ್ನು ಸಲ್ಲಿಸಿ ನ್ಯಾಯಾಧೀಶರ ಹೇಳಿಕೆ ಬಗ್ಗೆ ಆಂತರಿಕ ತನಿಖೆಗೆ ಒತ್ತಾಯಿಸಿತ್ತು.
ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಮತ್ತು ಶ್ರೀನಗರ ಸಂಸದ ರುಹುಲ್ಲಾ ಮೆಹದಿ ಹೇಳಿಕೆಯನ್ನು ಖಂಡಿಸಿದ್ದಾರೆ. ಸಂವಿಧಾನದ 124(4) ನೇ ವಿಧಿಯ ಅಡಿಯಲ್ಲಿ ಸಂಸತ್ತಿನಲ್ಲಿ ದೋಷಾರೋಪಣೆಯನ್ನು ಮಂಡಿಸುವ ಬಗ್ಗೆಯೂ ಸಂಸದ ರುಹುಲ್ಲಾ ಮೆಹದಿ ಹೇಳಿದ್ದಾರೆ. ಹಿರಿಯ ವಕೀಲೆ ರೆಬೆಕಾ ಜಾನ್ ಅವರು ಭಾಷಣವನ್ನು "ಸಂವಿಧಾನದ ಮೇಲಿನ ಆಕ್ರಮಣ" ಎಂದು ಹೇಳಿದ್ದರು.