ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್!

Update: 2024-05-05 09:12 GMT

ಕಂಗನಾ ರಣಾವತ್ (Photo:X/@KanganaTeam)

ಮಂಡಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಕಂಗನಾ ರಣಾವತ್, ತೇಜಸ್ವಿ ಯಾದವ್ ಎಂದು ತಪ್ಪಾಗಿ ಭಾವಿಸಿ, ತಮ್ಮದೇ ಪಕ್ಷದ ನಾಯಕ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಘಟನೆ ಶನಿವಾರ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

ಕೆಲವು ವಿರೋಧ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್, ಮಾತಿನ ಭರದ ನಡುವೆ ಕರ್ನಾಟಕ ಸಂಸದ ಹಾಗೂ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಗೂಂಡಾಗಿರಿ ಪ್ರದರ್ಶಿಸುತ್ತಿದ್ದು, ಮೀನು ತಿನ್ನುತ್ತಾರೆ ಎಂದು ಆರೋಪಿಸಿದರು. ಆದರೆ, ನವರಾತ್ರಿಯ ಸಂದರ್ಭದಲ್ಲಿ ಮೀನು ಸೇವಿಸಿದ ಕಾರಣಕ್ಕೆ ತೇಜಸ್ವಿ ಯಾದವ್ ಟೀಕೆಗೊಳಗಾಗಿದ್ದರು. ಎಪ್ರಿಲ್ 9ರಂದು ತಮ್ಮ ಬಿಡುವಿಲ್ಲದ ಲೋಕಸಭಾ ಚುನಾವಣಾ ಪ್ರಚಾರದ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದ ತೇಜಸ್ವಿ ಯಾದವ್, ತಾವು ಕರಿದ ಮೀನು ತಿನ್ನುತ್ತಿರುವ ತುಣುಕನ್ನು ಹಂಚಿಕೊಂಡಿದ್ದರು.

ಇದೀಗ, ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಕಂಗನಾ ರಣಾವತ್, “ಹಾಳಾಗಿರುವ ರಾಜಕುಮಾರರ ಪಕ್ಷವೊಂದಿದೆ. ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿಯಾಗಿರಲಿ, ಗೂಂಡಾಗಿರಿ ಪ್ರದರ್ಶಿಸಿ, ಮೀನು ತಿನ್ನುವ ತೇಜಸ್ವಿ ಸೂರ್ಯ ಆಗಿರಲಿ ಅಥವಾ ವಿಚಿತ್ರ ಹೇಳಿಕೆ ನೀಡುವ ಅಖಿಲೇಶ್ ಯಾದವ್ ಆಗಿರಲಿ..” ಎಂದು ಭಾಷಣ ಮಾಡಿದ್ದಾರೆ. ಈ ಭಾಷಣದ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್ ಹಾಗೂ ಅದರ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಕಂಗನಾ ರಣಾವತ್, “ಈ ದೇಶದ ಭಾಷೆ ಹಾಗೂ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲಾರದವರು ಈ ದೇಶವನ್ನು ಮುನ್ನಡೆಸಲು ಹೇಗೆ ಸಾಧ್ಯ ?" ಎಂದು ಕಿಡಿ ಕಾರಿದ್ದಾರೆ.

ಕಂಗನಾ ರಣಾವತ್ ಅವರ ಈ ಭಾಷಣದ ವಿಡಿಯೊವನ್ನು IANS ಸುದ್ದಿ ಸಂಸ್ಥೆ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News