ಕೇದಾರನಾಥ: ಭೂಕುಸಿತದಲ್ಲಿ ಐವರು ಕಾರು ಪ್ರಯಾಣಿಕರ ಮೃತ್ಯು
Update: 2023-08-12 16:57 GMT
ಹೊಸದಿಲ್ಲಿ: ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥ ಸಮೀಪದ ಗುಪ್ತಾಕ್ಷಿ-ಗೌರಿಕುಂಡ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಭೂಕುಸಿತದಲ್ಲಿ ಐವರು ಯಾತ್ರಿಕರು ಸಾವನ್ನಪ್ಪಿದ್ದರು.
ಭೂಕುಸಿತದಿಂದಾಗಿ ಬೆಟ್ಟದಿಂದ ಉರುಳಿದ ಬಂಡೆಕಲ್ಲುಗಳ ರಾಶಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿ, ದುರಂತ ಸಂಭವಿಸಿದೆ. ಅವಘಡಕ್ಕೀಡಾದ ಕಾರು ಕೇದಾರನಾಥಕ್ಕೆ ಪ್ರಯಾಣಿಸುತ್ತಿತ್ತು. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಕಾರು ಪ್ರಯಾಣಿಸುತ್ತಿದ್ದಾಗ ಉರುಳಿಬಿದ್ದ ಬಂಡೆಗಲ್ಲುಗಳ ರಾಶಿಯಡಿ ಸಿಲುಕಿದ ಕಾರು ನಜುಗುಜ್ಜಾಗಿದೆ. ದುರಂತದಲ್ಲಿ ಮೃತಪಟ್ಟವರಲ್ಲಿ ಮೂವರು ಗುಜರಾತ್ ರಾಜ್ಯದವರೆಂದು ತಿಳಿದುಬಂದಿದೆ.
ಗುಪ್ತಾಕ್ಷಿ-ಗೌರಿಕುಂಡ ಹೆದ್ದಾರಿಯಲ್ಲಿರುವ ಫಟಾ ಸಮೀಪದ ತರ್ಸಾಲಿಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 60 ಮೀಟರ್ ವಿಸ್ತೀರ್ಣದ ರಸ್ತೆಯು ಕೊಚ್ಚಿಹೋಗಿದೆ. ಭೂಕುಸಿತವಾದಾಗ ಫಾಟಾ ಹಾಗೂ ಸೋನ್ ಪ್ರಯಾಗ ನಡುವೆ ಇರುವ ಪರ್ವತದಿಂದ ಉರುಳಿದ್ದ ಬಂಡೆಗಲ್ಲುಗಳು ಕಾರಿಗೆ ಅಪ್ಪಳಿಸಿದ್ದವು.