ವೈದ್ಯಕೀಯ ಪರೀಕ್ಷೆಗಾಗಿ 1 ವಾರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ
ಹೊಸದಿಲ್ಲಿ : ತನ್ನ 21 ದಿನಗಳ ಮಧ್ಯಂತರ ಜಾಮೀನನ್ನು ವೈದ್ಯಕೀಯ ಕಾರಣಗಳಿಗಾಗಿ ಇನ್ನು ಒಂದು ವಾರ ವಿಸ್ತರಿಸಬೇಕು ಎಂದು ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿನ ಜೈಲು ವಾಸದ ವೇಳೆ, ತನ್ನ ಆರೋಗ್ಯವು ‘‘ತೀರಾ ಹದಗೆಟ್ಟಿದ್ದು’’, ಅದಕ್ಕಾಗಿ ತಾನು ತುರ್ತಾಗಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗಿದೆ ಎಂದು ಕೇಜ್ರಿವಾಲ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಜಾರಿ ನಿರ್ದೇಶನಾಲ(ಈಡಿ)ಯದ ಪ್ರಕರಣದಲ್ಲಿ, ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಕೇಜ್ರಿವಾಲ್ರಿಗೆ ಸುಪ್ರೀಂ ಕೋರ್ಟ್ ಮೇ 10ರಂದು ಮಧ್ಯಂತರ ಜಾಮೀನು ನೀಡಿತ್ತು. ಪಕ್ಷದ ಮುಖ್ಯಸ್ಥನ ನೆಲೆಯಲ್ಲಿ, ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವುದಕ್ಕಾಗಿ ಅವರಿಗೆ ಜಾಮೀನು ನೀಡಲಾಗಿತ್ತು.
ತಾನು ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ರೋಗ ಪತ್ತೆ ಪರೀಕ್ಷೆಗಳಿಗೆ ಒಳಗಾಗಬೇಕಾಗಿರುವುದರಿಂದ ಏಳು ದಿನಗಳ ಜಾಮೀನು ವಿಸ್ತರಣೆ ನೀಡಬೇಕೆಂದು ಅವರು ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.
‘‘ತನ್ನ ಮಧ್ಯಂತರ ಜಾಮೀನನ್ನು ಒಂದು ವಾರ ವಿಸ್ತರಿಸಬೇಕೆಂದು ಅರ್ಜಿದಾರ ಕೇಜ್ರಿವಾಲ್ ಮನವಿ ಮಾಡುತ್ತಾರೆ. ಈ ಅವಧಿಯಲ್ಲಿ ಅವರು ವೈದ್ಯರು ಸೂಚಿಸಿದ ಪರೀಕ್ಷೆಗಳಿಗೆ ಒಳಗಾಗಬಹುದು ಮತ್ತು ಫಲಿತಾಂಶವನ್ನು ಪಡೆಯಬಹುದು. ಜೂನ್ 3 (ಸೋಮವಾರ)ರಿಂದ ಜೂನ್ 7 (ಶುಕ್ರವಾರ)ರವರೆಗಿನ ಕೆಲಸದ ಅವಧಿಯ ವಾರದಲ್ಲಿ ಅರ್ಜಿದಾರರು ಎಲ್ಲಾ ಪರೀಕ್ಷೆಗಳಿಗೆ ಒಳಗಾಗುತ್ತಾರೆ ಮತ್ತು ವಾರಾಂತ್ಯದಲ್ಲಿ, ಅಂದರೆ ಜೂನ್ 9ರಂದು ಜೈಲಿಗೆ ಹಿಂದಿರುಗುತ್ತಾರೆ’’ ಎಂದು ಅವರ ಪರವಾಗಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಹೇಳಲಾಗಿದೆ.
ಮಾರ್ಚ್ 21ರಿಂದ ಮೇ 10ರವರೆಗಿನ ಅವಧಿಯಲ್ಲಿ ಕೇಜ್ರಿವಾಲ್ ಜೈಲಿನಲ್ಲಿದ್ದ ವೇಳೆ, ಅವರ ಆರೋಗ್ಯವು ಭಾರೀ ಪ್ರಮಾಣದಲ್ಲಿ ಹದಗೆಟ್ಟಿತ್ತು ಎಂದು ಹೇಳಿರುವ ಅರ್ಜಿಯು, ಇದಕ್ಕೆ ಜೈಲು ಅಧಿಕಾರಿಗಳ ‘‘ನಿರ್ಲಕ್ಷ್ಯದ ನಡವಳಿಕೆ’’ಯೂ ಒಂದು ಕಾರಣವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘‘ನನ್ನ ದೇಹದ ತೂಕವು ಸುಮಾರು 6-7 ಕೆಜಿಯಷ್ಟು ಕಡಿಮೆಯಾಗಿದೆ. ನನ್ನ ಹಿಂದಿನ ಜೀವನಶೈಲಿಯನ್ನು ಪುನರಾರಂಭಿಸದೆ ಈ ನಷ್ಟವಾಗಿರುವ ತೂಕವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಅದೂ ಅಲ್ಲದೆ, ರಕ್ತದಲ್ಲಿ ಗ್ಲುಕೋಸ್ ಮತ್ತು ಕೀಟೋನ್ ಮಟ್ಟಗಳಲ್ಲಿ ಏರಿಕೆಯಾಗಿದೆ. ಇದು ಮೂತ್ರಪಿಂಡ ಸಂಬಂಧಿ ಕಾಯಿಲೆಗಳಿರುವುದನ್ನು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ’’ ಎಂದು ಕೇಜ್ರಿವಾಲ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.