ಕೇರಳ| ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ SDPI
ತಿರುವನಂತಪುರಂ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವನ್ನು ಬೆಂಬಲಿಸುವುದಾಗಿ ಸೋಮವಾರ SDPI ಪ್ರಕಟಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ವಿರುದ್ಧ ರಚನೆಯಾಗಿರುವ ಇಂಡಿಯಾ ಮೈತ್ರಿಕೂಟವನ್ನು ಕಾಂಗ್ರೆಸ್ ಮುನ್ನಡೆಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇರಳ SDPI ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ಹೇಳಿದ್ದಾರೆ.
“ಕೇರಳದಲ್ಲಿ ನಮಗೆ ಎರಡು ಜಾತ್ಯತೀತ ರಂಗಗಳಿವೆ. ರಾಷ್ಟ್ರಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟವನ್ನು ಕಾಂಗ್ರೆಸ್ ಮುನ್ನಡೆಸುತ್ತಿರುವುದರಿಂದ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲಿಸಲು ನಿರ್ಧರಿಸಿದ್ದೇವೆ. ಬಿಜೆಪಿ ಸರಕಾರವು ಸಂವಿಧಾನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದು, ಪ್ರಜಾತಂತ್ರದಲ್ಲಿ ನಂಬಿಕೆ ಇರುವವರು ಇದನ್ನು ವಿರೋಧಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಾತ್ಯತೀತರನ್ನು ಬೆಂಬಲಿಸುವುದು ನಮ್ಮ ನೀತಿಯಾಗಿದೆ” ಎಂದೂ ಅವರು ಹೇಳಿದ್ದಾರೆ.
SDPI ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್, “SDPI ನಾಯಕರೊಂದಿಗೆ ಯುಡಿಎಫ್ ಯಾವುದೇ ಚರ್ಚೆ ನಡೆಸಿಲ್ಲ ಅಥವಾ ಲೋಕಸಭಾ ಚುನಾವಣೆಗಾಗಿ ಆ ಪಕ್ಷದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ವಿ.ಡಿ.ಸತೀಸನ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಅಶ್ರಫ್ ಮೌಲವಿ, ಯುಡಿಎಫ್ ಅನ್ನು ಬೆಂಬಲಿಸುವುದು ರಾಜಕೀಯ ನಿರ್ಧಾರವಾಗಿದ್ದು, ಇದನ್ನು SDPI ರಾಜ್ಯ ಘಟಕ ತೆಗೆದುಕೊಂಡಿದೆ ಎಂದು ಹೇಳಿದ್ದು, “ದೇಶದ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಹಾಗೂ ಆಂತರಿಕ ಚರ್ಚೆಯ ನಂತರ ನಾವು ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು SDPI ನಿರ್ಧರಿಸಿದ್ದು, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ 18 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ವರದಿಯಾಗಿದೆ.