ಜೈಲಿನಲ್ಲಿ ಲಾರೆನ್ಸ್ ಬಿಷ್ಣೋಯಿ ಸಂದರ್ಶನ ವಿವಾದ: 7 ಮಂದಿ ಪಂಜಾಬ್ ಪೊಲೀಸರ ಅಮಾನತು
ಚಂಡೀಗಢ: 2022ರಲ್ಲಿ ಜೈಲಿನಲ್ಲೇ ನಡೆದಿದ್ದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಂದರ್ಶನ ವಿವಾದಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರಕಾರ 7 ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿದೆ. ತಮ್ಮ ಅಜಾಗರೂಕತೆ ಹಾಗೂ ನಿರ್ಲಕ್ಷ್ಯಕ್ಕಾಗಿ ಅಮಾನತಿಗೀಡಾಗಿರುವ ಪೊಲೀಸ್ ಸಿಬ್ಬಂದಿಗಳ ಪೈಕಿ ಉಪ ಪೊಲೀಸ್ ಅಧೀಕ್ಷಕರ ದರ್ಜೆಯ ಇಬ್ಬರು ಅಧಿಕಾರಿಗಳಾದ ಗುರ್ಶೇರ್ ಸಿಂಗ್ ಹಾಗೂ ಸಮ್ಮರ್ ವನೀತ್ ಸೇರಿದ್ದಾರೆ.
ಸೆಪ್ಟೆಂಬರ್ 2022ರಲ್ಲಿ ಖರಾರ್ ಸಿಐಎ ವಶದಲ್ಲಿದ್ದಾಗ ಲಾರೆನ್ಸ್ ಬಿಷ್ಣೋಯಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶನ ನೀಡಿರುವುದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ ರಚನೆಯಾಗಿದ್ದ ವಿಶೇಷ ತನಿಖಾ ತಂಡ ಪತ್ತೆ ಹಚ್ಚಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಈ ಅಮಾನತಿನ ಆದೇಶವನ್ನು ರಾಜ್ಯ ಗೃಹ ಕಾರ್ಯದರ್ಶಿ ಗುರ್ಕೀರತ್ ಕಿರ್ಪಾಲ್ ಸಿಂಗ್ ಹೊರಡಿಸಿದ್ದಾರೆ. ಅಮಾನತಿಗೀಡಾಗಿರುವ ಇನ್ನಿತರ ಪೊಲೀಸ್ ಸಿಬ್ಬಂದಿಗಳ ಪೈಕಿ ಸಬ್ ಇನ್ಸ್ ಪೆಕ್ಟರ್ ರೀನಾ, ಸಬ್ ಇನ್ಸ್ ಪೆಕ್ಟರ್ (ಎಲ್ಆರ್) ಜಗತ್ಪಾಲ್ ಜಂಗು, ಸಬ್ ಇನ್ಸ್ ಪೆಕ್ಟರ್ ಶಗನ್ ಜಿತ್ ಸಿಂಗ್ (ಅಂದಿನ ಕರ್ತವ್ಯನಿರತ ಅಧಿಕಾರಿ) ಹಾಗೂ ಮುಖ್ಯ ಪೇದೆ ಓಂ ಪ್ರಕಾಶ್ ಸೇರಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಸಂದರ್ಶನ ಜೈಪುರ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ ಎಂದು ವಿಶೇಷ ತನಿಖಾ ತಂಡವು ರಾಜಸ್ಥಾನ ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ಒದಗಿಸಿತ್ತು. ಆದರೆ, ನಂತರ, ಈ ಸಂದರ್ಶನ ಪಂಜಾಬ್ ನ ಜೈಲೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿತ್ತು.