ಲಿಥಿಯಂ ಅನ್ವೇಷಣೆ, ಗಣಿಗಾರಿಕೆ: ಅರ್ಜೆಂಟೀನಾ ಜೊತೆ 200 ಕೋಟಿ ರೂ. ಒಪ್ಪಂದಕ್ಕೆ ಭಾರತ ಸಹಿ
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಗಣಿ ಕಂಪೆನಿಗಳ ಜಂಟಿ ಸಂಸ್ಥೆಯಾದ ‘ಖಾಂಜಿ ಬಿದೇಶ್ ಇಂಡಿಯಾ ಲಿಮಿಟೆಡ್’ , ಅರ್ಜೆಂಟೀನಾ ಸರಕಾರ ಒಡೆತನದ ‘ಕಾಟಾಮಾರ್ಕಾ ಮಿನೆರಾ ವೈ ಎನರ್ಜಾಟಿಕಾ ಸೊಸೈಡಾಡ್ ಡೆಲ್ ಎಸ್ಟ್ರಾಡೊ’ ಕಂಪೆನಿಯ ಜೊತೆ 200 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ದಕ್ಷಿಣ ಅಮೆರಿಕ ಖಂಡದ ರಾಷ್ಟ್ರವಾದ ಅರ್ಜೆಂಚೀನಾದ ಕಾಟಾಮಾರ್ಕಾ ಪ್ರಾಂತದಲ್ಲಿ ಲಿಥಿಯಂ ನಿಕ್ಷೇಪಗಳ ಅನ್ವೇಷಣೆ ಹಾಗೂ ಹೊರತೆಗೆಯುವುದಕ್ಕಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕಲ್ಲಿದ್ದಲು ಹಾಗೂ ಗಣಿ ಇಲಾಖೆಯ ಸಚಿವ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಸಾಮಾಜಿಕ ಜಾಲತಾಣ ʼxʼನಲ್ಲಿ ಪ್ರಕಟಿಸಿದ್ದಾರೆ.
‘‘ಲಿಥಿಯಂ ಪೂರೈಕೆಗಳನ್ನು ಬಲಪಡಿಸಲು ಭಾರತಕ್ಕೆ ಈ ಯೋಜನೆಯು ನೆರವಾಗಲಿದೆ. ಇದೇ ವೇಳೆ ಲಿಥಿಯಂ ಗಣಿಗಾರಿಕೆಯನ್ನು ಹಾಗೂ ಗ್ರಾಹಕರಿಗೆ ನಿಕಟವಾಗಿರುವಂತಹ ಉತ್ಪನ್ನ ವಲಯಗಳನ್ನು ಉಭಯ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುವುದು’’ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಲಿಥಿಯಂ ಗಟ್ಟಿಯಾದ ಬಂಡೆಗಳಲ್ಲಿ ದೊರೆಯುವ ಅಪರೂಪದ ಖನಿಜವಾಗಿದೆ. ಇಲೆಕ್ಟ್ರಿಕ್ ವಾಹನಗಳು ಹಾಗೂ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಕೆಯಾಗುವ ರಿಚಾರ್ಜೇಬಲ್ ಬ್ಯಾಟರಿಗಳಲ್ಲಿ ಅದನ್ನು ಬಳಸಲಾಗುತ್ತದೆ.
ಇಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡುವ ಮೂಲಕ ಜಗತ್ತನ್ನು ಅಂಗಾರಾಮ್ಲದಿಂದ ಮುಕ್ತಗೊಳಿಸುವ ತಮ್ಮ ಗುರಿಯನ್ನು ಸಾಧಿಸಲು ಜಗತ್ತಿನಾದ್ಯಂತ ಸರಕಾರಗಳು ಯೋಜನೆಗಳನ್ನು ಹಮ್ಮಿಕೊಂಡಿರುವುದರಿಂದ ಈ ಕೈಗಾರಿಕೆಗಳಿಗೆ ಲಿಥಿಯಂನ ಪೂರೈಕೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಆದಾಗ್ಯೂ, ಲಿಥಿಯಂನ್ನು ಗಣಿಗಳಿಂದ ಹೊರತೆಗೆಯುವ ಕಾರ್ಯವು ಸುಸ್ಥಿರವಾದುದಲ್ಲ. ಲಿಥಿಯಂನ ಉತ್ಖನನಕ್ಕೆ ಕೋಟ್ಯಾಂತರ ಗ್ಯಾಲನ್‌ಗಳಷ್ಟು ಅಂತರ್ಜಲದ ಅಗತ್ಯವಿದೆ ಹಾಗೂ ಲಿಥಿಯಂ ಗಣಿಗಾರಿಕೆಯಿಂದಾಗಿ ಅಂತರ್ಜಲವು ಹಲವು ಶತಮಾನಗಳವರೆಗೆ ಮಲಿನಗೊಳ್ಳುವ ಸಾಧ್ಯತೆಯಿದೆ. ಅಲ್ಲಿಂದ ಲಿಥಿಯಂ ಗಣಿಗಾರಿಕೆ ಪ್ರಕ್ರಿಯೆಯು ದೊಡ್ಡ ಪ್ರಮಾಣದ ತ್ಯಾಜ್ಯರಾಶಿಯನ್ನು ಸೃಷ್ಟಿಸುತ್ತದೆ.
ಕಾಂಬಿಲ್ ಜಂಟಿ ಉದ್ಯಮವು 15,703 ಹೆಕ್ಟೇರ್ ಪ್ರದೇಶದಲ್ಲಿ 5 ಲಿಥಿಯಂ ನಿಕ್ಷೇಪಗಳ ಬ್ಲಾಕ್‌ಗಳ ಅನ್ವೇಷಣೆ ಹಾಗೂ ಅಭಿವೃದ್ಧಿಯನ್ನು ನಡೆಸಲಿದೆ ಎಂದು ಕೇಂದ್ರ ಗಣಿಗಾರಿಕೆ ಸಚಿವಾಲಯವು ತಿಳಿಸಿದೆ.
ಭಾರತಕ್ಕೆ ಲಿಥಿಯಂ ಪೂರೈಕೆಗಾಗಿ ಅರ್ಜೆಂಟೀನಾ ಹಾಗೂ ಬೊಲಿವಿಯಾ ಡೊತೆ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿರುವುದಾಗಿ ಕೇಂದ್ರ ಗಣಿಗಾರಿಕಾ ಸಚಿವಾಲಯದ ಕಾರ್ಯದರ್ಶಿ ವಿ.ಎಲ್.ಕಾಂತರಾವ್ ದೃಢಪಡಿಸಿದ್ದಾರೆ.