ಲೋಕೋಪೈಲಟ್‌ಗಳ ಧೃತಿಗೆಡಿಸಲು ವಿರೋಧ ಪಕ್ಷಗಳಿಂದ ಭಾರಿ ಪ್ರಮಾಣದ ತಪ್ಪು ಮಾಹಿತಿ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪ

ಅಶ್ವಿನಿ ವೈಷ್ಣವ್ | PTI
ಹೊಸದಿಲ್ಲಿ: ಲೋಕೋಪೈಲಟ್‌ಗಳು ರೈಲ್ವೆ ಕುಟುಂಬದ ಪ್ರಮುಖ ಸದಸ್ಯರಾಗಿದ್ದು, ಅವರ ಧೃತಿಗೆಡಿಸಲು ವಿರೋಧ ಪಕ್ಷಗಳು ಭಾರಿ ಪ್ರಮಾಣದ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದು ಬುಧವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪಿಸಿದ್ದಾರೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಶ್ವಿನಿ ವೈಷ್ಣವ್, ರೈಲು ಚಾಲಕರ ಉದ್ಯೋಗ ಪರಿಸರವನ್ನು ಸುಧಾರಿಸಲು ರೈಲ್ವೆ ಇಲಾಖೆಯು ತೆಗೆದುಕೊಂಡಿರುವ ವಿವಿಧ ಕ್ರಮಗಳ ಕುರಿತು ಬೆಳಕು ಚೆಲ್ಲಿದ್ದಾರೆ.
"ಲೋಕೋಪೈಲಟ್‌ಗಳ ಕರ್ತವ್ಯದ ಅವಧಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪ್ರತಿ ಪ್ರಯಾಣದ ನಂತರ ನಾಜೂಕಾಗಿ ವಿರಾಮವನ್ನು ಒದಗಿಸಲಾಗುತ್ತಿದೆ. ನಿಗದಿ ಅವಧಿಯೊಳಗೇ ಸರಾಸರಿ ಕರ್ತವ್ಯದ ಅವಧಿಯನ್ನು ನಿರ್ವಹಿಸಲಾಗುತ್ತಿದೆ" ಎಂದು ಅವರು ಬರೆದುಕೊಂಡಿದ್ದಾರೆ.
"ಜೂನ್ ತಿಂಗಳಲ್ಲಿ ಸರಾಸರಿ ಕರ್ತವ್ಯದ ಅವಧಿಯು ಎಂಟು ಗಂಟೆಗಿಂತ ಕಡಿಮೆ ಇದೆ. ವಿರಳ ಸಂದರ್ಭಗಳಲ್ಲಿ ಮಾತ್ರ ನಿಗದಿ ಅವಧಿ ಮೀರಿದೆ" ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
Loco pilots are important members of the railway family. Since there is a lot of misinformation and theatrics by opposition to demotivate our Loco pilots, let me make things very clear;
— Ashwini Vaishnaw (@AshwiniVaishnaw) July 10, 2024
Improved working conditions;
Duty hours of loco pilots are carefully monitored. Rest is…
ಇತ್ತೀಚೆಗೆ ದಿಲ್ಲಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅಲ್ಲಿ ಲೋಕೋಪೈಲಟ್‌ಗಳ ಗುಂಪೊಂದರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಲೋಕೋಪೈಲಟ್‌ಗಳು ತಮಗೆ ಸೂಕ್ತ ಅವಧಿಯ ವಿಶ್ರಾಂತಿ ದೊರೆಯುತ್ತಿಲ್ಲ ಎಂದು ರಾಹುಲ್ ಗಾಂಧಿ ಬಳಿ ದೂರಿದ್ದಾರೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಹೇಳಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟೀಕರಣ ನೀಡಿದ್ದಾರೆ.