ಮಹಾ ಕುಂಭ ಮೇಳಕ್ಕೆ ಬಾಂಬ್ ಬೆದರಿಕೆ | ಮುಸ್ಲಿಂ ಸೋಗಿನಲ್ಲಿ ಪೋಸ್ಟ್ ಮಾಡಿದ್ದ ಆಯುಷ್ ಕುಮಾರ್ ಜೈಸ್ವಾಲ್ ನನ್ನು ಬಂಧಿಸಿದ ಪೊಲೀಸರು
ಪ್ರಯಾಗ್ ರಾಜ್: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಒಡ್ಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಆಯುಷ್ ಕುಮಾರ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ದಾಳಿಯ ಬೆದರಿಕೆ ಒಡ್ಡಿರುವುದು ಆಯುಷ್ ಕುಮಾರ್ ಜೈಸ್ವಾಲ್ ಎಂಬ ವ್ಯಕ್ತಿಯೇ ಎಂದು ದೃಢಪಟ್ಟ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಹಾ ಕುಂಭ ಮೇಳದ ಮೇಲೆ ಬಾಂಬ್ ದಾಳಿ ನಡೆಸಿ, 1,000 ಮಂದಿಯನ್ನು ಹತ್ಯೆಗೈಯ್ಯಲಾಗುವುದು ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಪ್ರಕಟಗೊಂಡ ನಂತರ, ಈ ಬಂಧನ ನಡೆದಿದೆ. ಈ ಬೆದರಿಕೆಯನ್ನು ನಾಸಿರ್ ಪಠಾಣ್ ಎಂಬ ನಕಲಿ ವ್ಯಕ್ತಿಯ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಒಡ್ಡಲಾಗಿತ್ತು. ಪೊಲೀಸರ ಪ್ರಕಾರ, ತನ್ನ ನೆರೆಮನೆಯಲ್ಲಿ ವಾಸಿಸುತ್ತಿರುವ ನಾಸಿರ್ ಪಠಾಣ್ ಎಂಬ ವ್ಯಕ್ತಿಯನ್ನು ಈ ಆರೋಪದಲ್ಲಿ ಸಿಲುಕಿಸಲು ಆಯುಷ್ ಕುಮಾರ್ ಜೈಸ್ವಾಲ್ ನಕಲಿ ಖಾತೆಯನ್ನು ಸೃಷ್ಟಿಸಿದ್ದ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಾಂಬ್ ಬೆದರಿಕೆಯು ವೈರಲ್ ಆಗುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಮಹಾ ಕುಂಭ ಮೇಳ ಪೊಲೀಸರು, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಐಪಿ ವಿಳಾಸವನ್ನು ಬಳಸಿಕೊಂಡು, ಈ ಬೆದರಿಕೆ ಹಿಂದಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಅವರು ಸಫಲರಾಗಿದ್ದಾರೆ. ಈ ತನಿಖೆಯ ಭಾಗವಾಗಿ ರಚನೆಯಾಗಿದ್ದ ಮೂರು ಪೊಲೀಸ್ ತಂಡಗಳು ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಈ ಬೆದರಿಕೆಯು ದೇಶವ್ಯಾಪಿ ಗಮನ ಸೆಳೆಯುತ್ತಿದ್ದಂತೆಯೆ, ಆಯುಷ್ ಕುಮಾರ್ ಜೈಸ್ವಾಲ್ ನೇಪಾಳಕ್ಕೆ ಪರಾರಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಆತ ಬಿಹಾರಕ್ಕೆ ಮರಳಿದ ನಂತರ, ಬಿಹಾರ ಪೊಲೀಸರ ನೆರವಿನೊಂದಿಗೆ ಆತನನ್ನು ಬಂಧಿಸುವಲ್ಲಿ ಮಹಾ ಕುಂಭ ಮೇಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಯುಷ್ ಕುಮಾರ್ ಜೈಸ್ವಾಲ್ ಬಿಹಾರ ರಾಜ್ಯದ ಪೂರ್ನಿಯ ಜಿಲ್ಲೆಯ ಭವಾನಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾದಿಗಂಜ್ ಪ್ರದೇಶದ ನಿವಾಸಿಯಾಗಿದ್ದು, ಆತನನ್ನು ಬಿಹಾರ ಪೊಲೀಸರು ಹಾಗೂ ಮಹಾ ಕುಂಭ ಮೇಳ ಪೊಲೀಸರ ಜಂಟಿ ತಂಡಗಳು ಬಂಧಿಸಿವೆ. ಆಯುಷ್ ಕುಮಾರ್ ಜೈಸ್ವಾಲ್ ನನ್ನು ಮುಂದಿನ ವಿಚಾರಣೆಗಾಗಿ ಪ್ರಯಾಗ್ ರಾಜ್ ಗೆ ಕರೆ ತರಲಾಗಿದೆ.