ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಪಕ್ಷವಿರೋಧಿ ಚಟುವಟಿಕೆಗಳಿಗಾಗಿ 40 ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟಿಸಿದ ಬಿಜೆಪಿ
Update: 2024-11-06 16:03 GMT
ಮುಂಬೈ : ಚುನಾವಣೆ ಸನ್ನಿಹಿತವಾಗಿರುವ ಮಹಾರಾಷ್ಟ್ರದಾದ್ಯಂತ ಪಕ್ಷದಲ್ಲಿ ಈ ಹಿಂದೆಂದೂ ಕಂಡಿರದಿದ್ದ ಬಂಡಾಯವನ್ನು ಎದುರಿಸುತ್ತಿರುವ ಬಿಜೆಪಿಯು 36 ವಿಧಾನಸಭಾ ಕ್ಷೇತ್ರಗಳಲ್ಲಿ 40 ಬಂಡಾಯ ಅಭ್ಯರ್ಥಿಗಳು ಮತ್ತು ಹಿರಿಯ ನಾಯಕರನ್ನು ಉಚ್ಚಾಟಿಸಿದೆ.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಉಚ್ಚಾಟಿಸಲಾಗಿರುವ 40 ಬಂಡಾಯ ಅಭ್ಯರ್ಥಿಗಳನ್ನು ಬಿಜೆಪಿ ಹೇಳಿಕೆಯಲ್ಲಿ ಹೆಸರಿಸಿದೆ.
ನಂದೂರ್ಬಾರ್ನಿಂದ ಎರಡು ಬಾರಿ ಸಂಸದೆಯಾಗಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಡಾ.ಹೀನಾ ಗಾವಿತ್ ಅವರು ಅಕ್ಕಲ್ಕುವಾ ಕ್ಷೇತ್ರದಲ್ಲಿ ಶಿಂದೆ ಶಿವಸೇನೆಯ ಅಧಿಕೃತ ಅಭ್ಯರ್ಥಿ ಅಮಶ್ಯಾ ಪಾಡ್ವಿ ವಿರುದ್ಧ ಸ್ಪರ್ಧಿಸದಂತೆ ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿದ ಬಳಿಕ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಾಡ್ವಿ ವಿರುದ್ಧ ತನ್ನ ನಾಮಪತ್ರವನ್ನು ಹಿಂದೆಗೆದುಕೊಳ್ಳದಿದ್ದರೆ ಶಿಸ್ತುಕ್ರಮವನ್ನು ತೆಗೆದುಕೊಳ್ಳುವುದಾಗಿ ಬಿಜೆಪಿ ಎಚ್ಚರಿಕೆ ನೀಡಿತ್ತು.