ಮಹಾರಾಷ್ಟ್ರ: 800 ವರ್ಷ ಹಳೆಯ ಜುಮಾ ಮಸೀದಿಯಲ್ಲಿ ಪ್ರಾರ್ಥನೆ ನಿಲ್ಲಿಸಲು ಜಿಲ್ಲಾಧಿಕಾರಿ ಆದೇಶ

Update: 2023-07-15 17:03 GMT

Photo : thewire.in

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಎರಂಡೋಲ್ ತಾಲೂಕಿನಲ್ಲಿರುವ 800 ವರ್ಷಗಳ ಹಳೆಯ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಮಧ್ಯಂತರ ಆದೇಶವೊಂದನ್ನು ಹೊರಡಿಸಿದ್ದಾರೆ. ಬಲಪಂಥೀಯ ಸಂಘಟನೆಯೊಂದು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ 144ನೇ ವಿಧಿಯಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.

ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತೆಯೂ ಜಿಲ್ಲಾಧಿಕಾರಿ ತನ್ನ ಆದೇಶದಲ್ಲಿ ಹೇಳಿದ್ದಾರೆ.

ಮಸೀದಿ ‘‘ವಿವಾದಾಸ್ಪದ’’ ಎಂಬುದಾಗಿ ಬಣ್ಣಿಸಿರುವ ಜಿಲ್ಲಾಧಿಕಾರಿ, ಅದರ ನಿಯಂತ್ರಣವನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರ್ ಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿಯ ಮಧ್ಯಂತರ ಆದೇಶ ಮತ್ತು ಈ ಆದೇಶವನ್ನು ನೀಡಲು ಅವರಿಗಿರುವ ಅಧಿಕಾರವನ್ನು ಜುಮ್ಮಾ ಮಸೀದಿ ಟ್ರಸ್ಟ್ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠದಲ್ಲಿ ಪ್ರಶ್ನಿಸಿದೆ.

ಆದರೆ, ಜಿಲ್ಲಾಧಿಕಾರಿಯ ಈ ಅಸಾಧಾರಣ ಆದೇಶವು ರಾಜ್ಯದಲ್ಲಿರುವ ಶತಕಗಳ ಹಳೆಯ ಮಸೀದಿಯನ್ನು ಕೋಮು ಸಂಘರ್ಷಕ್ಕೆ ಬಳಸಿಕೊಳ್ಳುವ ಯೋಜನೆಯೊಂದರ ಆರಂಭವಾಗಿರಬಹುದು ಎಂಬ ಭೀತಿಯನ್ನು ಟ್ರಸ್ಟ್ ನ ಸದಸ್ಯ ಅಸ್ಲಮ್ ವ್ಯಕ್ತಪಡಿಸುತ್ತಾರೆ. ನನಗೆ ತಿಳಿದಿರುವಷ್ಟು ಹಿಂದಿನಿಂದಲೂ, ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ದಿನಕ್ಕೆ ಐದು ಬಾರಿ ಮುಸ್ಲಿಮರು ಸೇರುತ್ತಿದ್ದರು ಎಂದು ಅವರು ಹೇಳುತ್ತಾರೆ.

‘ಪಾಂಡವ್ವಾದ ಸಂಘರ್ಷ ಸಮಿತಿ’ ಎಂಬ ನೋಂದಣಿಯಾಗದ ಸಂಘಟನೆಯೊಂದು ದೂರು ಸಲ್ಲಿಸಿದ ಬಳಿಕ, ಈ ಶತಮಾನಗಳ ಹಳೆಯ ಮಸೀದಿ ಒಮ್ಮೆಲೆ ವಿವಾದಕ್ಕೀಡಾಯಿತು. ದೂರುದಾರ ಪ್ರಸಾದ್ ಮಧುಸೂದನ್ ದಂಡವತೆ ಮೇ ತಿಂಗಳ ಮಧ್ಯ ಭಾಗದಲ್ಲಿ ಜಲಗಾಂವ್ ಜಿಲ್ಲಾಧಿಕಾರಿ ಅಮನ್ ಮಿತ್ತಲ್ಗೆ ದೂರು ಸಲ್ಲಿಸಿದರು. ಹಿಂದೂಗಳ ದೇವಸ್ಥಾನದ ಮೇಲೆ ಮಸೀದಿಯನ್ನು ಕಟ್ಟಲಾಗಿದೆ ಎಂದು ಅವರು ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಜುಮ್ಮಾ ಮಸೀದಿ ಟ್ರಸ್ಟ್ ಆ ಸ್ಥಳವನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಜೂನ್ ಕೊನೆಯಲ್ಲಿ ತಮಗೆ ನೋಟಿಸ್ ಬಂದಾಗಲೇ ಜಿಲ್ಲಾಧಿಕಾರಿಗೆ ದೂರು ಹೋಗಿರುವ ವಿಷಯ ತಮಗೆ ತಿಳಿದದ್ದು ಎಂದು ಟ್ರಸ್ಟ್ ಸದಸ್ಯರು ಹೇಳುತ್ತಾರೆ. ‘‘ಆ ವೇಳೆಗಾಗಲೇ, ಜಿಲ್ಲಾಧಿಕಾರಿ ವಿಚಾರಣೆಗಳನ್ನು ನಡೆಸುತ್ತಿದ್ದರು. ಸೀಮಿತ ಅವಧಿಯಲ್ಲಿ ದೂರಿಗೆ ಪ್ರತಿಕ್ರಿಯಿಸುವಂತೆ ನಮಗೆ ಸೂಚಿಸಲಾಯಿತು. ಅಂತಿಮವಾಗಿ, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಮುಸ್ಲಿಮರನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಜುಲೈ 11ರಂದು ಆದೇಶ ಹೊರಡಿಸಿದರು’’ ಎಂದು ಅಸ್ಲಮ್ ಹೇಳಿದರು.

ಅದೇ ವೇಳೆ, ಮಸೀದಿಯು ಪುರಾತನ ಕಟ್ಟಡ ಎನ್ನುವ ಮಸೀದಿ ಟ್ರಸ್ಟ್ ನ ಹೇಳಿಕೆಯನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಬೆಂಬಲಿಸಿದೆ. 1986ರಲ್ಲಿ ತಾನು ಮಸೀದಿಯೊಂದಿಗೆ ಸಂಪರ್ಕಕ್ಕೆ ಬಂದಂದಿನಿಂದಲೂ, ಮಸೀದಿ ಆವರಣದ ಒಳಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿತ್ತು ಎಂದು ಎಎಸ್ಐ ಹೇಳಿದೆ. ಮಸೀದಿಯು ತಲೆತಲಾಂತರದಿಂದಲೂ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸ್ಥಳವಾಗಿತ್ತು ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News