ಭವಿಷ್ಯದ ಚುನಾವಣೆಗಳಲ್ಲಿ ಮತ ಪತ್ರದ ಬಳಕೆ ಮಾಡಬೇಕು ಎಂಬ ನಿರ್ಣಯ ಅಂಗೀಕರಿಸಿದ ಮಹಾರಾಷ್ಟ್ರ ಗ್ರಾಮ

Update: 2024-12-10 13:56 GMT

ಸಾಂದರ್ಭಿಕ ಚಿತ್ರ | PC: PTI

ಪುಣೆ : ಭವಿಷ್ಯದ ಚುನಾವಣೆಗಳಲ್ಲಿ ಮತಪತ್ರದ ಬಳಕೆ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳುವ ಮೂಲಕ ಮಹಾರಾಷ್ಟ್ರ ರಾಜ್ಯದಲ್ಲಿ ವಿದ್ಯುನ್ಮಾನ ಮತಯಂತ್ರಗಳ ವಿರುದ್ಧ ನಿರ್ಣಯ ಕೈಗೊಂಡ ಎರಡನೆ ಗ್ರಾಮವಾಗಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊಲೆವಾಡಿ ಗ್ರಾಮಸಭೆ ಸೇರ್ಪಡೆಯಾಗಿದೆ.

ಈ ಗ್ರಾಮ ಕರಡ್ (ದಕ್ಷಿಣ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು, ಈ ಕ್ಷೇತ್ರವನ್ನು ಈ ಮುಂಚೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಪ್ರತಿನಿಧಿಸುತ್ತಿದ್ದರು. ನವೆಂಬರ್ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅತುಲ್ ಭೋಸಲೆ ವಿರುದ್ಧ ಅವರು 39,355 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಕೊಲೆವಾಡಿ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ ನಂತರ, ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸಂಶಯ ವ್ಯಕ್ತಪಡಿಸಿ, ಸೊಲ್ಲಾಪುರದ ಮಲ್ಷಿರಾಸ್ ವಿಧಾನಸಭಾ ಕ್ಷೇತ್ರದ ಮರ್ಕಡ್ವಾಡಿ ಗ್ರಾಮಸ್ಥರು ಮತಪತ್ರಗಳ ಮೂಲಕ ಅಣಕು ಮರು ಚುನಾವಣೆ ನಡೆಸಲು ಮುಂದಾಗಿದ್ದ ಬೆನ್ನಿಗೇ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಆದರೆ, ಅವರ ಪ್ರಯತ್ನಗಳನ್ನು ವಿಫಲಗೊಳಿಸಿದ್ದ ಜಿಲ್ಲಾಡಳಿತ ಮತ್ತು ಪೊಲೀಸರು, ಮರ್ಕಡ್ವಾಡಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News