"ಪ್ರಧಾನಿ ‘ಸುಳ್ಳುಗಳ ಜಾಲವನ್ನು’ ಹೆಣೆಯುತ್ತಿದ್ದಾರೆ": 4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

Update: 2024-07-14 11:13 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ನಾಲ್ಕು ವರ್ಷಗಳಲ್ಲಿ ಎಂಟು ಕೋಟಿ ಉದ್ಯೋಗಗಳನ್ನು ಸೃಷ್ಟಿಸಿರುವುದು ನಿರುದ್ಯೋಗದ ಬಗ್ಗೆ ಸುಳ್ಳು ನಿರೂಪಣೆಗಳನ್ನು ಹರಡುತ್ತಿರುವವರನ್ನು ಮೌನವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮುಂಬೈನಲ್ಲಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಪ್ರಧಾನಿ ‘ಸುಳ್ಳುಗಳ ಜಾಲವನ್ನು’ ಹೆಣೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನರೇಂದ್ರ ಮೋದಿಯವರೇ,ನಿನ್ನೆ ನೀವು ಮುಂಬೈನಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಸುಳ್ಳುಗಳ ಜಾಲವನ್ನು ಹೆಣೆಯುತ್ತಿದ್ದಿರಿ. 2020,ಆಗಸ್ಟ್‌ನಲ್ಲಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ)ಯನ್ನು ಘೋಷಿಸುವಾಗ ನೀವು ಹೇಳಿದ್ದನ್ನು ನಿಮಗೆ ನೆನಪಿಸಲು ಬಯಸುತ್ತೇನೆ. ‘ಎನ್‌ಆರ್‌ಎ ಕೋಟ್ಯಂತರ ಯುವಜನರಿಗೆ ವರದಾನವಾಗಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯು ಹಲವಾರು ಪರೀಕ್ಷೆಗಳ ಅಗತ್ಯವನ್ನು ನಿವಾರಿಸುತ್ತದೆ, ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಅದು ಪಾರದರ್ಶಕತೆಯನ್ನೂ ಹೆಚ್ಚಿಸುತ್ತದೆ ’ಎಂದು ನೀವು ಹೇಳಿದ್ದೀರಿ ಎಂದು ಖರ್ಗೆ ರವಿವಾರ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ನಾಲ್ಕು ವರ್ಷಗಳಲ್ಲಿ ಎನ್‌ಆರ್‌ಎ ಒಂದೇ ಒಂದು ಪರೀಕ್ಷೆಯನ್ನು ನಡೆಸಿಲ್ಲ ಏಕೆ? ಅದು ಹಂಚಿಕೆಯಾಗಿದ್ದ 1,517 ಕೋಟಿ ರೂ.ಗಳ ನಿಧಿಯಲ್ಲಿ ಕೇವಲ 58 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು ಏಕೆ? ಎಸ್‌ಸಿ,ಎಸ್‌ಟಿ,ಒಬಿಸಿ ಮತ್ತು ಇಡಬ್ಲ್ಯುಎಸ್ ಸಮುದಾಯಗಳ ಯುವಜನರ ಮೀಸಲಾತಿ ಹಕ್ಕುಗಳನ್ನು ಕಿತ್ತುಕೊಳ್ಳಲು ಅದನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿ ಇರಿಸಲಾಗಿದೆಯೇ?’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿವಾದವನ್ನು ಪ್ರಸ್ತಾಪಿಸಿರುವ ಅವರು,‘ಪರೀಕ್ಷೆಗಳಲ್ಲಿ ಅಕ್ರಮಗಳನ್ನು ನಡೆಸಲು ಮತ್ತು ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಲು ರಾಷ್ಟ್ರಿಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಬಳಸಲಾಗಿದೆ ಮತ್ತು ಎನ್‌ಆರ್‌ಎ ಪರೀಕ್ಷೆಗಳನ್ನೇ ನಡೆಸಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಲು ಮತ್ತು ಯುವಜನರ ಭವಿಷ್ಯವನ್ನು ಮುಗಿಸಿಬಿಡಲು ಪಣ ತೊಟ್ಟಿವೆ. ನಾವು ಹಿಂದೆಯೂ ಎನ್‌ಆರ್‌ಎ ವಿಷಯವನ್ನು ಎತ್ತಿದ್ದೆವು,ಆದರೆ ಮೋದಿ ಸರಕಾರವು ಮೌನವೃತದ ಪ್ರತಿಜ್ಞೆಯನ್ನು ಮಾಡಿದೆ ’ಎಂದು ಖರ್ಗೆ ಹೇಳಿದ್ದಾರೆ.

2023-24ರ ನಡುವೆ ಭಾರತದಲ್ಲಿ ಸುಮಾರು 4.7 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿರುವ ಆರ್‌ಬಿಐ ವರದಿಯನ್ನೂ ಮೋದಿ ಶನಿವಾರ ಮುಂಬೈನಲ್ಲಿ ತನ್ನ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News