ಧರಣಿ ನಿರತರ ವೈದ್ಯರ ಎದುರು ಹಾಜರಾದ ಮಮತಾ | ಧರಣಿ ನಿಲ್ಲಿಸಿ ಕೆಲಸಕ್ಕೆ ಹಾಜರಾಗುವಂತೆ ಒತ್ತಾಯ
ಕೋಲ್ಕತಾ : ಕೋಲ್ಕತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆ ಅತ್ಯಾಚಾರ ಮತ್ತು ಕೊಲೆಯನ್ನು ಪ್ರತಿಭಟಿಸಿ ಕಿರಿಯ ವೈದ್ಯರು ಧರಣಿ ನಡೆಸುತ್ತಿರುವ ನಗರದ ಸ್ವಾಸ್ಥ್ಯ ಭವನಕ್ಕೆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಅಚ್ಚರಿಯ ಭೇಟಿ ನೀಡಿದರು ಮತ್ತು ಕೆಲಸಕ್ಕೆ ಮರಳುವಂತೆ ವೈದ್ಯರಿಗೆ ಮನವಿ ಮಾಡಿದರು.
ವೈದ್ಯರು ಸ್ವಾಸ್ಥ್ಯ ಭವನದ ಹೊರಗೆ ಧರಣಿ ನಡೆಸುತ್ತಿದ್ದಾರೆ.
‘‘ನೀವು ರಸ್ತೆಯಲ್ಲಿ ಮಳೆಯಲ್ಲೇ ಧರಣಿ ನಡೆಸುತ್ತಿರುವುದರಿಂದ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ನಿಮ್ಮ ಬೇಡಿಕೆಗಳನ್ನು ನಾನು ಪರಿಶೀಲಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ’’ ಎಂದು ಧರಣಿನಿರತ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದರು.
‘‘ನಿಮ್ಮ ಪ್ರತಿಭಟನೆಯ ಉದ್ದೇಶ ನನಗೆ ಅರ್ಥ ಆಗುತ್ತದೆ. ನಾನು ಕೂಡ ವಿದ್ಯಾರ್ಥಿ ನಾಯಕಿಯಾಗಿದ್ದೆ. ನಾನು ನಿಮಗೆ ನ್ಯಾಯ ಒದಗಿಸುತ್ತೇನೆ. ನಿಮ್ಮ ಸಹಾಯವಿಲ್ಲದೆ ಹಿರಿಯ ವೈದ್ಯರು ಕೆಲಸ ಮಾಡಲು ಸಾಧ್ಯವಿಲ್ಲ. ಕೆಲಸಕ್ಕೆ ಮರಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’’ ಎಂದು ಮಮತಾ ಹೇಳಿದರು.
ಆದರೆ, ಮಾತುಕತೆಗಳು ನಡೆಯುವವರೆಗೆ ನಮ್ಮ ಬೇಡಿಕೆಗಳಲ್ಲಿ ರಾಜಿ ಮಾಡಿಕೊಳ್ಳಲು ನಾವು ತಯಾರಿಲ್ಲ ಎಂದು ಧರಣಿನಿರತ ವೈದ್ಯರು ಈ ಸಂದರ್ಭದಲ್ಲಿ ಹೇಳಿದರು.
► ಧರಣಿ 5ನೇ ದಿನಕ್ಕೆ
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾಗಿರುವ ವೈದ್ಯೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಕೋಲ್ಕತದ ಸಾಲ್ಟ್ ಲೇಕ್‌ನಲ್ಲಿರುವ ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯ ಹೊರಗೆ ಕಿರಿಯ ವೈದ್ಯರು ನಡೆಸುತ್ತಿರುವ ಧರಣಿಯು ಶನಿವಾರ ಐದನೇ ದಿನಕ್ಕೆ ಕಾಲಿರಿಸಿದೆ.
ಸತತವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ಅವರು ಧರಣಿ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು, ಸೆಪ್ಟಂಬರ್ 10ರ ಸಂಜೆ 5 ಗಂಟೆಯ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಧರಣಿನಿರತ ವೈದ್ಯರಿಗೆ ಸೂಚನೆಯನ್ನೂ ನೀಡಿತ್ತು. ಆದರೆ, ಸರ್ವೋಚ್ಛ ನ್ಯಾಯಾಲಯದ ಸೂಚನೆಯನ್ನೂ ಧಿಕ್ಕರಿಸಿ ವೈದ್ಯರು ಧರಣಿ ಮುಂದುವರಿಸಿದ್ದಾರೆ.
ಅತ್ಯಾಚಾರ-ಕೊಲೆ ಘಟನೆಯ ಹಿನ್ನೆಲೆಯಲ್ಲಿ, ತಮ್ಮ ಕರ್ತವ್ಯಗಳನ್ನು ನಿಭಾಯಿಸಲು ವಿಫಲವಾಗಿರುವುದಕ್ಕಾಗಿ ಕೋಲ್ಕತ ಪೊಲೀಸ್ ಕಮಿಶನರ್ ವಿನೀತ್ ಗೋಯಲ್, ಆರೋಗ್ಯ ಕಾರ್ಯದರ್ಶಿ ಎನ್.ಎಸ್. ನಿಗಮ್, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಜೂನಿಯರ್ ವೈದ್ಯರು ಮುಂದಿಟ್ಟಿದ್ದಾರೆ.
ಅದೂ ಅಲ್ಲದೆ, ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ಆರೋಗ್ಯ ಕೆಲಸಗಾರರಿಗೆ ಭದ್ರತೆ ನೀಡಬೇಕು ಎಂಬುದಾಗಿಯೂ ಅವರು ಒತ್ತಾಯಿಸಿದ್ದಾರೆ.
► ವೈದ್ಯರ ಮೇಲೆ ದಾಳಿ ನಡೆಸಲು ಪಿತೂರಿ: ಇಬ್ಬರ ಬಂಧನ
ಕೋಲ್ಕತದ ಸಾಲ್ಟ್ ಲೇಕ್‌ನಲ್ಲಿರುವ ಸ್ವಾಸ್ಥ್ಯ ಭವನದ ಹೊರಗೆ ಧರಣಿ ನಡೆಸುತ್ತಿರುವ ಕಿರಿಯ ವೈದ್ಯರ ಮೇಲೆ ದಾಳಿ ನಡೆಸಲು ಪಿತೂರಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓಬ್ಬ ವ್ಯಕ್ತಿಯನ್ನು ಸಿಪಿಎಂ ನಾಯಕ ಕಲತನ್ ದಾಸ್‌ಗುಪ್ತ ಎಂಬುದಾಗಿ ಗುರುತಿಸಲಾಗಿದೆ.
ಮಮತಾ ಬ್ಯಾನರ್ಜಿ ಸರಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಧರಣಿನಿರತ ವೈದ್ಯರ ಮೇಲೆ ಆಕ್ರಮಣ ನಡೆಸಲು ಪಿತೂರಿಯೊಂದನ್ನು ರೂಪಿಸಲಾಗುತ್ತಿದೆ ಎಂಬುದಾಗಿ ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ಆರೋಪಿಸಿದ ಒಂದು ದಿನದ ಬಳಿಕ ಈ ಬಂಧನ ನಡೆದಿದೆ. ತನ್ನ ಆರೋಪಕ್ಕೆ ಪೂರಕವಾಗಿ ಅವರು ಫೋನ್ ಕರೆಯೊಂದರ ಧ್ವನಿಮುದ್ರಣವನ್ನು ಬಿಡುಗಡೆಗೊಳಿಸಿದ್ದರು.
ದಾಸ್‌ಗುಪ್ತನನ್ನು ಧರಣಿ ನಡೆಯುತ್ತಿರುವ ಸ್ಥಳದಿಂದ ಬಂಧಿಸಲಾಗಿದೆ ಮತ್ತು ಸಂಜೀವ್ ದಾಸ್ ಎಂಬ ಇನ್ನೋರ್ವ ಆರೋಪಿಯನ್ನು ಶುಕ್ರವಾರ ರಾತ್ರಿ ದಕ್ಷಿಣ ಕೋಲ್ಕತದ ಹಲ್ತು ಎಂಬ ಪ್ರದೇಶದಿಂದ ಬಂಧಿಸಲಾಗಿದೆ.
ಫೋನ್ ಕರೆಯ ಧ್ವನಿ ಮುದ್ರಣಕ್ಕೆ ಸಂಬಂಧಿಸಿ ಕೋಲ್ಕತ ಪೊಲೀಸರು ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಗುರುವಾರ ಸಂಜೆ ವೈದ್ಯರ ತಂಡವೊಂದು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಸರಕಾರಿ ಸಚಿವಾಲಯ ನಾಬಣ್ಣಕ್ಕೆ ಹೋಗುವಾಗ, ಧರಣಿ ನಿರತರ ಮೇಲೆ ದಾಳಿ ನಡೆಸಲು ರೂಪಿಸಲಾಗಿದೆ ಎನ್ನಲಾದ ಯೋಜನೆಯ ಬಗ್ಗೆ ಫೋನ್‌ನಲ್ಲಿ ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವುದು ಈ ಧ್ವನಿಮುದ್ರಣದ ತುಣುಕಿನಲ್ಲಿ ಕೇಳುತ್ತದೆ. ಈ ದಾಳಿಯ ಹೊಣೆಯನ್ನು ಆಡಳಿತಾರೂಢ ಟಿಎಮ್‌ಸಿ ಮೇಲೆ ಹೊರಿಸುವ ಬಗ್ಗೆಯೂ ಆರೋಪಿಗಳು ಮಾತನಾಡಿದ್ದಾರೆ ಎನ್ನಲಾಗಿದೆ.
► ಧ್ವನಿಮುದ್ರಣದಲ್ಲಿ ಏನಿದೆ?
ಧ್ವನಿಮುದ್ರಣದಲ್ಲಿ, ವೈದ್ಯರು ಧರಣಿ ನಡೆಸುತ್ತಿರುವ ಸ್ಥಳದ ಮೇಲೆ ದಾಳಿ ನಡೆಸುವಂತೆ ‘ಸಾಹೇಬ’ರಿಂದ ತನಗೆ ಸೂಚನೆಗಳು ಬಂದಿವೆ ಎಂಬುದಾಗಿ ಓರ್ವ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಹೇಳುತ್ತಾನೆ. ಹಾಗೆಯೇ ಮಾಡುವಂತೆ ಆತನಿಗೆ ಇನ್ನೊಬ್ಬ ವ್ಯಕ್ತಿ ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಮೊದಲ ವ್ಯಕ್ತಿ, ಇಂಥ ಕೆಲಸಗಳನ್ನು ತಾನು ವರ್ಷಗಳಿಂದ ಮಾಡುತ್ತಾ ಬಂದಿದ್ದರೂ, ಅವರು ವೈದ್ಯರಾಗಿರುವುದರಿಂದ ಈ ಬಾರಿ ತನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳುತ್ತಾನೆ.
ಆಗ ಎರಡನೇ ವ್ಯಕ್ತಿಯು, ನೀವು ಅವರನ್ನು ‘‘ಮುಗಿಸಬೇಕಾಗಿಲ್ಲ’’, ‘‘ಅವರ ಮೇಲೆ ದಾಳಿ ಮಾಡಿದರೆ ಸಾಕು’’ ಎಂದು ಹೇಳುವ ಮೂಲಕ ಮನವರಿಕೆ ಮಾಡಲು ಯತ್ನಿಸುತ್ತಾನೆ.
ಬಳಿಕ, ದಾಳಿ ನಡೆಸಿ ಅದರ ಹೊಣೆಯನ್ನು ಟಿಎಮ್‌ಸಿ ಮೇಲೆ ಹೊರಿಸುವಂತೆ ‘ಬಪ್ಪಡ’ ಎಂಬ ವ್ಯಕ್ತಿ ನನಗೆ ಹೇಳಿದ್ದಾರೆ ಎಂದು ಮೊದಲ ವಕ್ತಿ ಹೇಳುತ್ತಾನೆ.
ಧ್ವನಿಮುದ್ರಣ ಬಿಡುಗಡೆಯ ಬಳಿಕ, ಧರಣಿ ಸ್ಥಳದ ಸುತ್ತಮುತ್ತಲಿನ 12ಕ್ಕೂ ಅಧಿಕ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸ್ಥಳಕ್ಕೆ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು 250ರಿಂದ 500ಕ್ಕೆ ಹೆಚ್ಚಿಸಲಾಗಿದೆ.