ಸಂಸದ ರಾಜೀನಾಮೆ: ನಿರ್ಧಾರ ಮರುಪರಿಶೀಲನೆಗೆ ಮಮತಾ ಬ್ಯಾನರ್ಜಿ ಮನವಿ

Update: 2024-09-09 03:55 GMT

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (PTI)

ಕೊಲ್ಕತ್ತಾ: ನಗರದ ಆರ್‍ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರಣೆಯ ವಿಳಂಬವನ್ನು ಖಂಡಿಸಿ, ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಟಿಎಂಸಿ ಸದಸ್ಯ ಜವಾಹರ್ ಸರ್ಕಾರ್ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ಪಕ್ಷದ ಅಧಿನಾಯಕಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದ ಸರ್ಕಾರ್, ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವುದಾಗಿ ಸ್ಪಷ್ಟಪಡಿಸಿದ್ದರು. ಜತೆಗೆ ರಾಜ್ಯವನ್ನು ರಕ್ಷಿಸುವಂತೆಯೂ ಆವರು ಆಗ್ರಹಿಸಿದ್ದರು. ದೆಹಲಿಗೆ ತೆರಳಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದರು. ಸೆಪ್ಟೆಂಬರ್ 11ರಂದು ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸರ್ಕಾರ್ ನಿರ್ಧಾರದ ಬಳಿಕ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ, ರಾಜ್ಯಸಭಾ ಸದಸ್ಯತ್ವ ತೊರೆಯುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೋರಿದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

"ನೀವು ಈ ಚಳವಳಿಯಲ್ಲಿ ಹಿಂದಿನ ಮಮತಾ ಶೈಲಿಯಲ್ಲಿ ಮಧ್ಯಪ್ರವೇಶಿಸುತ್ತೀರಿ ಎಂದು ನಾನು ಭಾವಿಸಿದ್ದೆ. ಆದರೆ ಅಂಥದ್ದನ್ನು ನಾನು ಕಂಡಿಲ್ಲ" ಎಂದು ಸರ್ಕಾರ್ ಪತ್ರದಲ್ಲಿ ಹೇಳಿದ್ದರು. ವೈದ್ಯರು ನಡೆಸುತ್ತಿರುವ ಪ್ರತಿಭಟನೆ, ತಡೆಯಿಲ್ಲದೇ ಕೆಲವರಿಗೆ ಅನುಕೂಲ ಮಾಡಿಕೊಡುವ ಮತ್ತು ಭ್ರಷ್ಟಾಚಾರದ ವಿರುದ್ಧದ ಆಕ್ರೋಶ ಎಂದು ಅವರು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News