ಪಶ್ಚಿಮ ಬಂಗಾಳ | ವಿಧಾನಸಭೆಯಲ್ಲಿ ಅತ್ಯಾಚಾರ ತಡೆ ಮಸೂದೆ ಮಂಡಿಸಲಿರುವ ಮಮತಾ ಬ್ಯಾನರ್ಜಿ ಸರ್ಕಾರ
ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಸರ್ಕಾರ ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಡಿಸಲಿದೆ.
ಪ್ರಸ್ತಾವಿತ ಶಾಸನವು, ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತರು ಮೃತಪಟ್ಟರೆ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಖಾತರಿಪಡಿಲಿದೆ. ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಅಪರಾಧಿಗಳಿಗೆ ಪೆರೋಲ್ ನೀಡದೆ ಜೀವಾವಧಿ ಶಿಕ್ಷೆಯನ್ನು ನೀಡಲಿದೆ.
'ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024' ಎಂಬ ಮಸೂದೆಯು ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹೊಸ ನಿಬಂಧನೆಗಳನ್ನು ಪರಿಷ್ಕರಿಸುವ ಮತ್ತು ಪರಿಚಯಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಗುರಿ ಹೊಂದಿದೆ.
ಕಳೆದ ತಿಂಗಳು ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಮತ್ತು ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮೊಲೊಯ್ ಘಾಟಕ್ ಹೇಳಿದ್ದಾರೆ.