ಕೇರಳ | ಕೇವಲ ಎರಡೂವರೆ ನಿಮಿಷಗಳಲ್ಲಿ ಬ್ಯಾಂಕ್ ನಿಂದ 15 ಲಕ್ಷ ರೂ. ಲೂಟಿಗೈದು ಪರಾರಿಯಾದ ದರೋಡೆಕೋರ!

Update: 2025-02-15 17:01 IST
ಕೇರಳ | ಕೇವಲ ಎರಡೂವರೆ ನಿಮಿಷಗಳಲ್ಲಿ ಬ್ಯಾಂಕ್ ನಿಂದ 15 ಲಕ್ಷ ರೂ. ಲೂಟಿಗೈದು ಪರಾರಿಯಾದ ದರೋಡೆಕೋರ!

Screengrab:X/@TheSouthfirst

  • whatsapp icon

ತ್ರಿಶೂರ್: ದರೋಡೆಕೋರನೊಬ್ಬ ಬ್ಯಾಂಕ್ ಸಿಬ್ಬಂದಿಗಳಿಗೆ ಚಾಕು ತೋರಿಸಿ, ಅವರನ್ನೆಲ್ಲ ಶೌಚಗೃಹದಲ್ಲಿ ಕೂಡಿ ಹಾಕಿ, ಕೇವಲ ಎರಡೂವರೆ ನಿಮಿಷಗಳಲ್ಲಿ ಬ್ಯಾಂಕ್ ನಿಂದ 15 ಲಕ್ಷ ರೂ.ಲೂಟಿ ಮಾಡಿ ತನ್ನ ಸ್ಕೂಟರ್ ನಲ್ಲಿ ಸಿನಿಮೀಯವಾಗಿ ಪರಾರಿಯಾಗಿರುವ ಘಟನೆ ಶುಕ್ರವಾರ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿನ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ.

ತನ್ನ ಬೆನ್ನ ಹಿಂದೆ ಚೀಲ ಧರಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿನ ಫೆಡರಲ್ ಬ್ಯಾಂಕ್ ಶಾಖೆಯೊಳಗೆ ಪ್ರವೇಶಿದ್ದು, ಈ ವೇಳೆ ಬಹುತೇಕ ಬ್ಯಾಂಕ್ ಸಿಬ್ಬಂದಿಗಳು ಭೋಜನಕ್ಕಾಗಿ ಬ್ಯಾಂಕ್ ನಿಂದ ಹೊರಗೆ ತೆರಳಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯನಿರತರಾಗಿದ್ದ ಇಬ್ಬರು ಬ್ಯಾಂಕ್ ಸಿಬ್ಬಂದಿಗಳಿಗೆ ಚಾಕು ತೋರಿಸಿ ಬೆದರಿಸಿರುವ ದರೋಡೆಕೋರ, ಅವರಿಬ್ಬರನ್ನು ಶೌಚಗೃಹದಲ್ಲಿ ಕೂಡಿ ಹಾಕಿದ್ದಾನೆ. ನಂತರ ನಗದು ಕೌಂಟರ್ ಗಾಜನ್ನು ಕುರ್ಚಿಯೊಂದರಿಂದ ಒಡೆದು ಹಾಕಿರುವ ಆತ, ನಗದಿನೊಂದಿಗೆ ಪರಾರಿಯಾಗಿದ್ದಾನೆ. ಈ ಇಡೀ ಘಟನೆ ಕೇವಲ ಎರಡೂವರೆ ನಿಮಿಷಗಳಲ್ಲಿ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ದರೋಡೆಕೋರನ ಪತ್ತೆಗೆ ಶೋಧ ಕಾರ್ಯ ಕೈಗೊಂಡರೂ, ಆತನ ಸುಳಿವು ಇದುವರೆಗೂ ದೊರೆತಿಲ್ಲ. ದರೋಡೆಕೋರನಿಗೆ ಈ ಸ್ಥಳ ಚಿರಪರಿಚಿತವಿದ್ದಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ತ್ರಿಶೂರ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೃಷ್ಣಕುಮಾರ್, “ದುಷ್ಕರ್ಮಿಯು ಹಿಂದಿಯಲ್ಲಿ ಮಾತನಾಡುತ್ತಿದ್ದ. ನಗದು ಕೌಂಟರ್ ನಲ್ಲಿ ಬಂಡಲ್ ಕಟ್ಟಿದ 47 ಲಕ್ಷ ರೂ. ಮೊತ್ತದ ನಗದಿತ್ತು. ದರೋಡೆಕೋರನು ಕೇವಲ ಮೂರು ಬಂಡಲ್ ನಗದನ್ನು ಹೊತ್ತೊಯ್ದಿದ್ದು, ಅದರ ಮೊತ್ತ 15 ಲಕ್ಷ ರೂ. ಆಗಿದೆ.” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News