ಸಕಾರಾತ್ಮಕ ಮಾಹಿತಿಗಳಿಗೆ ಜನತೆಯ ಹಂಬಲವನ್ನು ‘ಮನ್ ಕಿ ಬಾತ್ ’ಸಾಬೀತು ಪಡಿಸಿದೆ: ಮೋದಿ

Update: 2024-09-29 14:57 GMT

ನರೇಂದ್ರ ಮೋದಿ | PC : PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ರವಿವಾರ ತನ್ನ ರೇಡಿಯೋ ಭಾಷಣ ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ಸರಣಿಯೊಂದಿಗೆ ಮನ್ ಕಿ ಬಾತ್ ಹತ್ತು ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ ಇಂದಿನ ಕಾರ್ಯಕ್ರಮ ಅತ್ಯಂತ ಭಾವನಾತ್ಮಕವಾದುದು ಎಂದವರು ತನ್ನ 114ನೇ ಕಂತಿನ ಭಾಷಣದಲ್ಲಿ ತಿಳಿಸಿದರು.

ಭಾರತದಲ್ಲಿ ಉತ್ಪಾದಿಸಿದ ವಸ್ತುಗಳನ್ನೇ ಖರೀದಿಸುವಂತೆ ಹಾಗೂ ಸ್ವಚ್ಛ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಅವರು ದೇಶದ ಜನತೆಗೆ ಕರೆ ನೀಡಿದರು.

ಮನ್ ಕಿ ಬಾತ್ ಕಾರ್ಯಕ್ರಮವು 2014ರ ಆಕ್ಟೋಬರ್ 3ರಂದು ಆರಂಭಗೊಂಡಿತ್ತು. ಅಂದು ವಿಜಯದಶಮಿ ದಿನವಾಗಿತ್ತು. ಈ ಸಲವೂ ಆಕ್ಟೋಬರ್ 3ರಂದು ನವರಾತ್ರಿಯ ಪ್ರಥಮ ದಿನ ಬಂದಿರುವುದು ಅತ್ಯಂತ ಆಹ್ಲಾದಕರ ಕಾಕತಾಳೀಯವಾಗಿದೆ ಎಂದವರು ಹೇಳಿದರು. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ರೋತೃಗಳೇ ನಿಜವಾದ ನಿರೂಪಕರಾಗಿದ್ದಾರೆ.

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮವು ಮಸಾಲೆಭರಿತವಾಗಿರದೆ ಇದ್ದಲ್ಲಿ ಅಥವಾ ನಕಾರಾತ್ಮಕತೆಯಿಂದ ಕೂಡಿರದೆ ಇದ್ದಲ್ಲಿ ಅದು ಹೆಚ್ಚು ಗಮನವನ್ನು ಸೆಳೆಯುವುದಿಲ್ಲ. ಆದರೆ ದೇಶದ ಜನತೆ ಸಕಾರಾತ್ಮಕ ಮಾಹಿತಿಗಾಗಿ ಎಷ್ಟು ಹಸಿದಿದ್ದಾರೆ ಎಂಬುದನ್ನು ‘ಮನ್ ಕಿ ಬಾತ್’ ಕಾರ್ಯಕ್ರಮವು ಸಾಬೀತುಪಡಿಸಿದೆ.ತನ್ನ ಬಾನುಲಿ ಭಾಷಣ ಮನ್ ಕಿ ಬಾತ್‌ನ ಹತ್ತು ವರ್ಷಗಳ ಪಯಣವು ಹೊಸ ಯಶೋಗಾಥೆಗಳು, ಸಾಧನೆಗಳು ಹಾಗೂ ನೂತನ ವ್ಯಕ್ತಿತ್ವಗಳ ಗುಚ್ಛವಾಗಿದೆ ಎಂದರು.

ಮನ್ ಕಿ ಬಾತ್‌ನ ಯಶಸ್ಸಿಗಾಗಿ ಟಿವಿ ವಾಹಿನಿಗಳು ಹಾಗೂ ಮುದ್ರಣ ಮಾಧ್ಯಮಕ್ಕೂ ಕೃತಜ್ಞತೆಯನ್ನು ಸಲ್ಲಿಸಿದ ಅವರು ಈ ಮಾಧ್ಯಮಗಳು ಪ್ರತಿಯೊಂದು ಮನೆಗೂ ಮನ್ ಕಿ ಬಾತ್ ಅನ್ನು ತಲುಪಿಸಿವೆ ಎಂದರು.

► ಜಲಸಂರಕ್ಷಣೆಯಲ್ಲಿ ಗ್ರಾಮೀಣ ಮಹಿಳೆಯರ ಸಾಧನೆ ಶ್ಲಾಘಿಸಿದ ಪ್ರಧಾನಿ

ಈ ಸಲದ ಮನ್ ಕಿ ಬಾತ್‌ನಲ್ಲಿ ಪ್ರಧಾನಿಯವರು ಜಲ ಸಂರಕ್ಷಣೆಯ ವಿಷಯವನ್ನು ಪ್ರಸ್ತಾವಿಸಿದರು. ನೀರಿನ ಬಿಕ್ಕಟ್ಚಿನ ಸಂದರ್ಭದಲ್ಲಿ ಮಳೆನೀರಿನ ಕೊಯ್ಲು ಅತ್ಯಂತ ಉಪಯುಕ್ತವಾಗಲಿದೆ. ಈ ನಿಟ್ಚಿನಲ್ಲಿ ಹಲವಾರು ವ್ಯಕ್ತಿಗಳು ಉತ್ಕೃಷ್ಟವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಒಂದು ಪ್ರಯತ್ನವನ್ನು ಉತ್ತರಪ್ರದೇಶದ ಝಾನ್ಸಿಯ ಕೆಲವು ಮಹಿಳೆಯರು ಮಾಡಿದ್ದು, ಘುರಾರಿ ನದಿಗೆ ಹೊಸ ಜೀವ ನೀಡಿದ್ದಾರೆ ಎಂದರು.

ಸ್ವಸಹಾಯ ಸಂಘಗಳ ಜೊತೆ ನಂಟು ಹೊಂದಿರುವ ಈ ಮಹಿಳೆಯರು ಜಲ್ ಸಹೇಲಿ (ನೀರಿನ ಗೆಳತಿ) ಎಂಬ ಅಭಿಯಾನವನ್ನು ನಡೆಸಿದರು. ಸಾಯುತ್ತಿದ್ದ ನದಿಯನ್ನು ಈ ಮಹಿಳೆಯರು ರಕ್ಷಿಸಿದ ರೀತಿ ಕಲ್ಪನೆಗೂ ಮೀರಿದ್ದಾಗಿದೆ. ಗೋಣಿಚೀಲಗಳಲ್ಲಿ ಮರಳನ್ನು ತುಂಬಿಸಿ ಚೆಕ್‌ಡ್ಯಾಮ್ ನಿರ್ಮಿಸಿದ ಮಹಿಳೆಯರು ನದಿಯು ನೀರಿನಿಂದ ತುಂಬಿಹರಿಯುವಂತೆ ಮಾಡಿದರು ಎಂದು ಮೋದಿ ಹೇಳಿದರು.

ಹಾಗೆಯೇ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ರಾಯಪುರಾ ಗ್ರಾಮದಲ್ಲಿ ದೊಡ್ಡ ಕೆರೆಯನ್ನು ನಿರ್ಮಿಸಿ ಅಂತರ್ಜಲದ ಮಟ್ಟವನ್ನು ಗಣನನೀಯವಾಗಿ ಹೆಚ್ಚಿಸಿದ ಮಹಿಳೆಯರನ್ನು ಕೂಡಾ ಅವರು ಭಾಷಣದಲ್ಲಿ ಅಭಿನಂದಿಸಿದರು. ಮಧ್ಯಪ್ರದೇಶದ ಛತಾರ್‌ಪುರ ಜಿಲ್ಲೆಯ ಖೌಂಪಾ ಗ್ರಾಮದಲ್ಲಿ ಬತ್ತಿ ಹೋಗಿದ್ದ ಕೆರೆಯಿಂದ ದೊಡ್ಡ ಪ್ರಮಾಣದ ಕೆಸರನ್ನು ತೆಗೆಯುವ ಮೂಲಕ ಅದು ನೀರಿನಿಂದ ತುಂಬುವಂತೆ ಮಾಡಿದ ಹರಿ ಭಾಗ್ಯ ಸ್ವಸಹಾಯ ಸಂಘದ ಮಹಿಳೆಯರನ್ನು ಪ್ರಧಾನಿ ಭಾಷಣದಲ್ಲಿ ಸ್ಮರಿಸಿದರು.

ಉತ್ತರಾಖಂಡದ ಝಾಲಾ ಗ್ರಾಮದಲ್ಲಿ ಪ್ರತಿ ದಿನ ಎರಡು ತಾಸುಗಳ ಕಾಲ ಗ್ರಾಮವನ್ನು ಸ್ವಚ್ಛಗೊಳಿಸುವ ಯುವಜರು, ಪುದುಚೇರಿಯ ಸಮುದ್ರ ಕಿನಾರೆಯಲ್ಲಿ ಯುವಜನರ ನೆರವಿನೊಂದಿಗೆ ನೈರ್ಮಲ್ಯ ಅಭಿಯಾನ ನಡೆಸ ಸಾಮಾಜಿಕ ಕಾರ್ಯಕರ್ತೆ ರಮ್ಯ ಅವರನ್ನು ಕೂಡಾ ಪ್ರಧಾನಿ ತನ್ನ ಭಾಷಣದಲ್ಲಿ ಶ್ಲಾಘಿಸಿದರು.

ತಮಿಳುನಾಡಿನ ಮದುರೈನ ಶಿಕ್ಷಕಿ ಶುಭಶ್ರೀ ಅವರು ಅತ್ಯಂತ ಅಪರೂಪದ ಹಾಗೂ ಅತ್ಯಂತ ಉಪಯುಕ್ತ ಗಿಡಮೂಲಿಕೆಗಳ ಉದ್ಯಾನವನ್ನು ನಿರ್ಮಿಸಿರುವ ಬಗ್ಗೆಯೂ ಮೋದಿ ತನ್ನ ರೇಡಿಯೊ ಭಾಷಣದಲ್ಲಿ ಗಮನಸೆಳೆದರು.

► ಮನ್ ಕಿ ಬಾತ್ ಹೈಲೈಟ್ಸ್

► ಭಾರತದ ನೆಲದಿಂದ ವಿದೇಶಕ್ಕೆ ಕಳ್ಳಸಾಗಣೆಯಾದ ಸುಮಾರು 300 ಪುರಾತನ ಕಲಾಕೃತಿಗಳನ್ನು ಅಮೆರಿಕ ಸರಕಾರವು ಹಿಂತಿರುಗಿಸಿದೆ.

► ಸಂತಾಲ್ ಬುಡಕಟ್ಟು ಜನರ ಭಾಷೆಯಾದ ಸಂತಾಲಿಯನ್ನು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.

►  ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಕೂಡಾ ಹತ್ತು ವರ್ಷಗಳನ್ನು ಪೂರ್ಣಗೊಳಿಸಿದೆ. ದೊಡ್ಡ ಕೈಗಾರಿಕೆಗಳಿಂದ ಹಿಡಿದು ಸಣ್ಣಪುಟ್ಟ ಅಂಗಡಿಮಾಲಕರವರೆಗೆ ಪ್ರತಿಯೊಬ್ಬರೂ ಈ ಅಭಿಯಾನದ ಯಶಸ್ಸಿನಲ್ಲಿ ಭಾಗಿಗಳಾಗಿದ್ದಾರೆ. ಬಡ, ಮಧ್ಯಮವರ್ಗ ಹಾಗೂ ಎಂಎಸ್‌ಎಂಇ (ಮಧ್ಯಮ,ಕಿರು ಹಾಗೂ ಸೂಕ್ಷ್ಮ) ಉದ್ಯಮಗಳುಈ ಅಭಿಯಾನದಿಂದ ಬಹಳಷ್ಟು ಪ್ರಯೋಜನ ಪಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News