ಜೈಲಿನಲ್ಲೇ ಭೇಟಿ, ಪೆರೋಲ್‌ನಲ್ಲಿ ಮದುವೆ; ಕೈದಿಗಳ ಅಪರೂಪದ ಪ್ರೇಮಕತೆ!

Update: 2023-07-15 16:39 GMT

ಸಾಂದರ್ಭಿಕ ಚಿತ್ರ \ Photo: PTI 

ಕೊಲ್ಕತ್ತಾ: ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಜೈಲಿನಲ್ಲಿ ಪರಸ್ಪರ ಪ್ರೀತಿಸಿ, ಪೆರೋಲ್‌ನಲ್ಲಿ ಹೊರ ಬಂದು ಮದುವೆಯಾದ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲಾ ಸುಧಾರಣಾ ಕೇಂದ್ರದಲ್ಲಿ ನಡೆದಿದೆ.

ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವಧು-ವರರಿಬ್ಬರೂ ಪ್ರಸ್ತುತ ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಹೋಮ್‌ನಲ್ಲಿ ಬಂಧಿತರಾಗಿದ್ದಾರೆ. ಅಲ್ಲಿಯೇ ಇಬ್ಬರೂ ಭೇಟಿಯಾಗಿದ್ದು, ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ.

ಶೀಘ್ರದಲ್ಲೇ ಅವರ ಪರಿಚಯವು ಪ್ರೇಮವಾಗಿ ಬದಲಾಗಿದ್ದು, ತಮ್ಮ ಸಂಬಂಧದ ಬಗ್ಗೆ ತಮ್ಮ ಕುಟುಂಬಗಳಿಗೆ ತಿಳಿಸಿದ್ದಾರೆ. ನಂತರ ಅವರು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮದುವೆಯಾದ ಜೋಡಿಯನ್ನು ಐದು ದಿನಗಳ ಕಾಲ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಯಿತು.

“ನಮ್ಮಿಬ್ಬರನ್ನೂ ಬರ್ಧಮಾನ್ ಸುಧಾರಣಾ ಕೇಂದ್ರದಲ್ಲಿ ಬಂಧಿಸಲಾಗಿದೆ. ನಾವು ಅಲ್ಲಿ ಪರಸ್ಪರ ಪರಿಚಯವಾದೆವು. ನಂತರ ನಾವು ನಿಧಾನವಾಗಿ ಮಾತನಾಡಲು ಪ್ರಾರಂಭಿಸಿದೆವು, ನಮ್ಮ ಸಂಬಂಧವು ಮುಂದುವರೆಯಿತು. ನಾವು ನಮ್ಮ ಜೀವನದ ಕತ್ತಲೆಯಿಂದ ಹೊರಬಂದು ನಮ್ಮ ಜೀವನವನ್ನು ಚೆನ್ನಾಗಿ ಬದುಕಲು ಬಯಸುತ್ತೇವೆ. ಮುಂದೆ ಯಾವುದೇ ಅಪರಾಧಗಳಿಗೆ ಸಿಲುಕಬಾರದೆಂದುಕೊಂಡಿದ್ದೇವೆ”ಎಂದು ವರ ಅಬ್ದುಲ್ ಹಸೀಮ್ ಹೇಳಿದ್ದಾರೆ

"ಇಲ್ಲಿಂದ ಹೊರಬಂದ ನಂತರ, ನಾನು ನನ್ನ ಜೀವನವನ್ನು ಚೆನ್ನಾಗಿ ಜೀವಿಸಲು ಮತ್ತು ಎಲ್ಲರಂತೆ ಕುಟುಂಬ ಜೀವನವನ್ನು ಆರಂಭಿಸಲು ಬಯಸುತ್ತೇನೆ." ಎಂದು ವಧು ಸಹನಾರಾ ಖಾತುನ್ ಹೇಳಿದ್ದಾರೆ.

ಬಿರ್‌ಭೂಮ್‌ನ ನಿವಾಸಿ ಖಾತುನ್ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದರೆ, ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಎಂಟು ವರ್ಷಗಳಿಂದ ಸುಧಾರಣಾ ಕೇಂದ್ರದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News