ನೂತನ ಎನ್‌ಡಿಎ ಸರ್ಕಾರದಲ್ಲಿ ಈ ಬಾರಿ ಏಳು ಮಹಿಳಾ ಸಚಿವರು

Update: 2024-06-10 07:09 GMT

ನಿರ್ಮಲಾ ಸೀತಾರಾಮನ್ / ಅನುಪ್ರಿಯಾ ಪಟೇಲ್ / ಅನ್ನಪೂರ್ಣ ದೇವಿ / ಶೋಭಾ ಕರಂದ್ಲಾಜೆ

ಹೊಸದಿಲ್ಲಿ: ಕೇಂದ್ರದ ನೂತನ ಎನ್‌ಡಿಎ ಸರ್ಕಾರದ ಭಾಗವಾಗಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ 72 ಮಂದಿ ಸಚಿವರಲ್ಲಿ ಒಟ್ಟು ಏಳು ಮಹಿಳಾ ಸಚಿವರಿದ್ದು ಅವರಲ್ಲಿ ಇಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವೆಯರಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿದ್ದ ಸಚಿವೆಯರ ಸಂಖ್ಯೆಗೆ ಹೋಲಿಸಿದಾಗ ಈ ಸಂಖ್ಯೆ ನಾಲ್ಕರಷ್ಟು ಕಡಿಮೆಯಾಗಿದೆ.

ರವಿವಾರ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಅವರು ಕ್ಯಾಬಿನೆಟ್ ದರ್ಜೆಯ ಸಚಿವೆಯರಾಗಿ ಪ್ರಮಾನವಚನ ಸ್ವೀಕರಿಸಿದರೆ ಪ್ರಮಾಣವಚನ ಸ್ವೀಕರಿಸಿದ ಇತರ ಮಹಿಳೆಯರೆಂದರೆ ಅನುಪ್ರಿಯಾ ಪಟೇಲ್, ರಕ್ಷಾ ಖಡ್ಸೆ, ಸಾವಿತ್ರಿ ಠಾಕುರ್, ಶೋಭಾ ಕರಂದ್ಲಾಜೆ ಮತ್ತು ನಿಮುಬೆನ್ ಬಂಭನಿಯಾ.

ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭಾ ಸಂಸದೆಯಾಗಿದ್ದು ಈ ಹಿಂದೆ ರಕ್ಷಣಾ ಮತ್ತು ವಿತ್ತ ಸಚಿವೆಯಾಗಿ ಅನುಭವ ಹೊಂದಿದವರು. ಅನ್ನಪೂರ್ಣ ದೇವಿ ಅವರು ಈ ಬಾರಿ ಎರಡನೇ ಬಾರಿ ಸಂಸದೆಯಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ಅವರು ಶಿಕ್ಷಣ ಖಾತೆಯ ರಾಜ್ಯ ಸಚಿವೆಯರಾಗಿದ್ದರು.

ಇತರ ಸಚಿವೆಯರ ಪೈಕಿ ಅನುಪ್ರಿಯಾ ಪಟೇಲ್ ಅವರು ಅಪ್ನಾ ದಲ್ (ಸೋನೆಲಾಲ್) ಮುಖ್ಯಸ್ಥೆಯಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿ  ಅವರು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆಯಾಗಿದ್ದರು. ಆಕೆಯ ಪಕ್ಷ ಈ ಬಾರಿ ಒಂದು ಸ್ಥಾನ ಗಳಿಸಿದೆ. ಕಳೆದ ಬಾರಿ ಎರಡು ಸ್ಥಾನಗಳನ್ನು ಆಕೆಯ ಪಕ್ಷ ಪಡೆದಿತ್ತು.

ಇನ್ನೋರ್ವ ಸಚಿವೆ ರಕ್ಷಾ ಖಡ್ಸೆ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ್ ಖಡ್ಸೆ ಅವರ ಪುತ್ರಿಯಾಗಿದ್ದು ಮೂರನೇ ಬಾರಿ ಸಂಶದೆಯಾಗಿರುವ ಆಕೆ ಹಿಂದೆ ಸರಪಂಚರಾಗಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು.

ಮೊದಲ ಬಾರಿ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಾವಿತ್ರಿ ಠಾಕುರ್ ಧರ್ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾದವರು. ಶೋಭಾ ಕರಂದ್ಲಾಜೆ ಕಳೆದ ಬಾರಿ ಕೃಷಿ, ಕೈಗಾರಿಕೆ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿದ್ದರು. ಆಕೆ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾದವರು.

ಭಾವ್ನಗರ್ ಸಂಸದೆಯಾಗಿರುವ ನಿಮುಬೆನ್ ಭಾಂಭನಿಯಾ ಮಾಜಿ ಶಿಕ್ಷಕಿಯಾಗಿದ್ದು ಭಾವ್ನಗರ್ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News