ವಕ್ಫ್ ಮಸೂದೆಯನ್ನು ವಿರೋಧಿಸದೇ ಹೋದರೆ, ನಿತೀಶ್, ನಾಯ್ಡು, ಚಿರಾಗ್ ರನ್ನು ಮುಸ್ಲಿಮರು ಕ್ಷಮಿಸುವುದಿಲ್ಲ : ಉವೈಸಿ

ಅಸದುದ್ದೀನ್ ಉವೈಸಿ | PC : PTI
ದಿಲ್ಲಿ, : ವಕ್ಫ್ ತಿದ್ದುಪಡಿ ಮಸೂದೆಯ ಮೂಲ ಉದ್ದೇಶ ಮಸೀದಿಗಳು, ಕಬರಸ್ತಾನ, ಮದರಸಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಅವರು ಈ ಅಪಾಯಕಾರಿ ಮಸೂದೆಯನ್ನು ವಿರೋಧಿಸದೇ ಹೋದರೆ, ಭಾರತೀಯ ಮುಸ್ಲಿಮರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ, ಮುಂದೆಂದೂ ಅವರ ಮೇಲೆ ವಿಶ್ವಾಸ ಇಡುವುದಿಲ್ಲ ಎಂದು ಎಐಎಂಐಎಮ್ ಸಂಸದ ಅಸದುದ್ದೀನ್ ಉವೈಸಿ ಎಚ್ಚರಿಕೆ ನೀಡಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ದೆಹಲಿಯ ಜಂತರ್ ಮಂತರಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ವಿರುದ್ಧ ಸೋಮವಾರ ನಡೆಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ಮಸೂದೆ ಮೂಲಕ ಮುಸ್ಲಿಂ ಸಮುದಾಯದ ಮೇಲೆ ನೇರ ದಾಳಿ ನಡೆಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು AIMPLB ಆರೋಪಿಸಿದೆ. ಈ ಮಸೂದೆ ವಕ್ಫ್ ಆಸ್ತಿಗಳನ್ನು ಸರಕಾರ ಅಕ್ರಮವಾಗಿ ವಶಪಡಿಸಿಕೊಳ್ಳಲು ದಾರಿ ಮಾಡಿಕೊಡಲಿದೆ ಎಂದು ಮಂಡಳಿ ಆರೋಪಿಸಿದೆ.
ಕಾಂಗ್ರೆಸ್ ಸಂಸದ ಗೌರವ್ ಗೋಗೋಯಿ, "JPC ಸಮಿತಿಯಲ್ಲಿ ಅನ್ಯಾಯ ನಡೆದಿದೆ. ಈ ಕಾನೂನು ಸಮಾಜದಲ್ಲಿ ಭಿನ್ನತೆ ಹುಟ್ಟಿಸುವ ಉದ್ದೇಶ ಹೊಂದಿದೆ," ಎಂದು ಹೇಳಿದರು. ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್, "ನಾವು ಈ ಮಸೂದೆಯ ವಿರುದ್ಧ ಕೊನೆಯ ಕ್ಷಣದವರೆಗೆ ಹೋರಾಡುತ್ತೇವೆ. ಸರ್ಕಾರಕ್ಕೆ ಸಂಸತ್ತನ್ನು ಶಾಂತಿಯಿಂದ ನಡೆಸಲು ಬಿಡುವುದಿಲ್ಲ," ಎಂದು ಹೇಳಿದರು.
ಮಾರ್ಚ್ 13ರಂದು ನಡೆಯಬೇಕಿದ್ದ ಈ ಪ್ರತಿಭಟನೆಯನ್ನು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. AIMPLB ಪ್ರಧಾನ ಕಾರ್ಯದರ್ಶಿ ಫಜ್ಲುರ್ ರಹೀಮ್ ಮುಜದ್ದಿದಿಯವರು, "ನಾವು ಸರ್ಕಾರಕ್ಕೆ ಪ್ರಜಾತಾಂತ್ರಿಕ ಹಾದಿಯಲ್ಲಿ ಮನವಿ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ನಮ್ಮ ಮಾತುಗಳನ್ನು ಗಮನಿಸದೆ, ನಮ್ಮ ಮೇಲೆ ಈ ತಿದ್ದುಪಡಿಯನ್ನು ಬಲವಂತವಾಗಿ ಹೇರಲು ಸರ್ಕಾರ ಹೊರಟಿದೆ. ನಾವು ಘರ್ಷಣೆ ಬಯಸುವುದಿಲ್ಲ, ಆದರೆ ಸರ್ಕಾರ ಎಲ್ಲೆಡೆ ಸಂಘರ್ಷ ಸೃಷ್ಟಿಸಲು ನೋಡುತ್ತಿದೆ. ಈ ತಿದ್ದುಪಡಿ ದೇಶದ ವಿರುದ್ಧವಿದೆ. ಸರ್ಕಾರ ನಮ್ಮ ಮುಗ್ಧ ಹಿಂದೂ ಸಹೋದರರನ್ನು ತಪ್ಪು ದಾರಿಗೆಳೆದಿದೆ," ಎಂದು ಹೇಳಿದ್ದಾರೆ. AIMPLB ವಕ್ತಾರ ಸಯ್ಯದ್ ಕಾಸಿಂ ರಸೂಲ್ ಇಲ್ಯಾಸ್ ಅವರು ಮಾತನಾಡಿ , ಸರ್ಕಾರ ಈ ಮಸೂದೆ ಮೂಲಕ ಭೇದಭಾವ ಮೆರೆದಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸಂಪುಟವು ಜಂಟಿ ಸಂಸದೀಯ ಸಮಿತಿಯ (JPC) ಶಿಫಾರಸುಗಳ ಆಧಾರದ ಮೇಲೆ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದ್ದು, ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ತಯಾರಾಗಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಸದ ಮುಹಮ್ಮದ್ ಬಶೀರ್ ಅವರು, "ಈ ಸರ್ಕಾರ ಸಂವಿಧಾನ ವಿರೋಧಿ ಕಾರ್ಯಗಳನ್ನು ನಡೆಸುತ್ತಿದೆ. JPC ಅಧ್ಯಕ್ಷರು ಅನಗತ್ಯವಾಗಿ ಪ್ರತಿಪಕ್ಷಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ವಕ್ಫ್ ಆಸ್ತಿಗಳನ್ನು ಸುಲಿಗೆ ಮಾಡುತ್ತಿದೆ. IUML ಪರವಾಗಿ, ನಾನು ಈ ಮಸೂದೆ ವಿರುದ್ಧ ಸಂಸತ್ ಒಳಗೂ ಹೊರಗೂ ಹೋರಾಟ ಮಾಡುತ್ತೇನೆ. ಇದು ಕ್ರೂರ ಕಾನೂನಾಗಿದೆ," ಎಂದು ಹೇಳಿದರು.
BJD ಸಂಸದ ಮೊಹಿಬುಲ್ಲಾ ಖಾನ್, "ಮಸೂದೆ ಬಗ್ಗೆ ನಾವು ನೀಡಿದ ಶಿಫಾರಸುಗಳನ್ನು JPC ಪರಿಗಣಿಸಿಲ್ಲ. ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ತಲೆ ಹಾಕುತ್ತಿದೆ, ಇದು ತೀರಾ ಅಪಾಯಕಾರಿಯಾಗಿದೆ," ಎಂದು ಎಚ್ಚರಿಸಿದರು.
AIMPLB ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸೇರಿದಂತೆ 11 ಪ್ರತಿಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖ ನಾಯಕರಲ್ಲಿ TMC ಸಂಸದ ಅಬೂ ತಾಹಿರ್ ಖಾನ್, TMC ಸಂಸದೆ ಮಹುವಾ ಮೊಯಿತ್ರ, IUML ಸಂಸದರಾದ ಮೊಹಮ್ಮದ್ ಬಶೀರ್, ಹಾರಿಸ್ ಬೀರಾನ್, ಪಿ ವಿ ಅಬ್ದುಲ್ ವಹ್ಹಾಬ್, NCP (SP) ಸಂಸದೆ ಫೌಜಿಯಾ ಖಾನ್, CPI (M) ಸಂಸದ ರಾಜಾರಾಂ ಸಿಂಗ್, AIMIM ಸಂಸದ ಅಸದುದ್ದೀನ್ ಓವೈಸಿ, BJD ಸಂಸದ ಮೊಹಿಬುಲ್ಲಾ ಖಾನ್, ಮತ್ತು ಕಾಂಗ್ರೆಸ್ ನಾಯಕರಾದ ಗೌರವ್ ಗೋಗೋಯಿ, ಪಪ್ಪು ಯಾದವ್, ಇಮ್ರಾನ್ ಮಸೂದ್, ಡಾ. ಮೊಹಮ್ಮದ್ ಜಾವೇದ್, ಸೈಯದ್ ನಾಸಿರ್ ಹುಸೇನ್ ಉಪಸ್ಥಿತರಿದ್ದರು. ಸಮಾಜವಾದಿ ಪಕ್ಷದ ಸಂಸದರಾದ ಅವದೇಶ್ ಪ್ರಸಾದ್ ಪಾಸಿ, ಧರ್ಮೇಂದ್ರ ಯಾದವ್, ಮೊಹಿಬುಲ್ಲಾ ನದ್ವಿ, ಜಿಯಾಉರ್ರಹ್ಮಾನ್ ಬಾರ್ಕ್ ಕೂಡಾ ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶೀದ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಯ ಅಧ್ಯಕ್ಷರಾಗಿರುವ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿ, ಜಮಿಯತ್ ಎ ಉಲಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನೀ ಮತ್ತು ಜಮಾಅತ್ ಎ ಇಸ್ಲಾಮಿ ಹಿಂದ್ ಅಧ್ಯಕ್ಷ ಸಯ್ಯದ್ ಸಾದತುಲ್ಲಾ ಹುಸೈನಿಯವರೂ ಹಾಜರಿದ್ದು ಮಾತನಾಡಿದರು. ಹಲವು ಮುಸ್ಲಿಮ್ ಮತ್ತು ಮುಸ್ಲಿಮೇತರ ಸಂಘಟನೆಗಳ ನಾಯಕರೂ ಉಪಸ್ಥಿತರಿದ್ದರು.
►ರಾಮ ಮಂದಿರ ಟ್ರಸ್ಟ್ ಗೆ ಮುಸ್ಲಿಮರನ್ನು ಹಾಕ್ತೀರಾ? : ಮಹುಆ ಮೊಯಿತ್ರಾ ಪ್ರಶ್ನೆ
ಈ ವಕ್ಫ್ ಬಿಲ್ ಅತ್ಯಂತ ಅಪಾಯಕಾರಿ ಮಸೂದೆ. ಈ ಮಸೂದೆಯನ್ನು ಪಾಸ್ ಮಾಡಲು ನಾವು ಬಿಡುವುದಿಲ್ಲ.
ಇದು ಮುಸ್ಲಿಮರ ಜಮೀನು ಕಬಳಿಸುವ ಯೋಜನೆಯಲ್ಲದೆ ಬೇರೇನೂ ಅಲ್ಲ. ಈ ಮಸೂದೆ ಬಂದರೆ ವಕ್ಫ್ ಭೂಮಿಯನ್ನು ಯಾವುದೇ ಜಿಲ್ಲಾಧಿಕಾರಿ ಏನಾದರೂ ಕಾರಣ ಕೊಟ್ಟು ವಶಪಡಿಸಿಕೊಳ್ಳಬಹುದು. ಈ ದೇಶದ ಬಹುತೇಕ ಮುಸ್ಲಿಮೇತರರು ಮುಸ್ಲಿಮರ ಜೊತೆ ಸೌಹಾರ್ದ, ಸಹಬಾಳ್ವೆ ಬಯಸುತ್ತಾರೆ. ಈ ವಕ್ಫ್ ಮಸೂದೆ ಮುಸಲ್ಮಾನರನ್ನು ಗುರಿಯಾಗಿಸಿ ತರಲಾಗುತ್ತಿದೆ ಎಂಬುದನ್ನು ಈ ದೇಶದ ಸರ್ವಧರ್ಮೀಯ ಜನರು ಅರಿತುಕೊಂಡಿದ್ದಾರೆ. ನಾಳೆ ರಾಮಜನ್ಮಭೂಮಿ ಟ್ರಸ್ಟ್ ನಲ್ಲಿ ಇಬ್ಬರು ಮುಸಲ್ಮಾನರನ್ನು ಹಾಕಿ ಅಂದ್ರೆ ಸಾಧ್ಯವಿದೆಯೇ? ಹಾಗಾದರೆ ವಕ್ಫ್ ಬೋರ್ಡ್ ನಲ್ಲಿ ಮುಸ್ಲಿಮೇತರರು ಯಾಕೆ ಬೇಕು? ಇದು ಮುಸ್ಲಿಮರನ್ನು ಹತಾಶರಾಗಿಸಿ ಪ್ರತ್ಯೇಕಿಸುವ ಸಂಚು ಇರುವ ಮಸೂದೆ, ಬೇರೇನಲ್ಲ. ಆದರೆ ಮುಸ್ಲಿಮರು ಎಲ್ಲಿಗೂ ಹೋಗುವುದಿಲ್ಲ, ಅವರು ಇಲ್ಲೇ ಇರುತ್ತಾರೆ. ಹೋಗುವುದಿದ್ದರೆ ಅವರೇ ಹೋಗಲಿ ಎಂದು ಟಿಎಂಸಿ ಸಂಸದೆ ಮಹುಆ ಮೊಯಿತ್ರಾ ಹೇಳಿದರು.