ರಾಷ್ಟ್ರೀಯ ಜಲ ಪ್ರಶಸ್ತಿ | ಜಲ ಸಂರಕ್ಷಣೆಯಲ್ಲಿ ಅಗ್ರಸ್ಥಾನ ಪಡೆದ ಒಡಿಶಾ, ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ
ಹೊಸದಿಲ್ಲಿ: ಐದನೆಯ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರಕಟಗೊಂಡಿದ್ದು, ಜಲ ಸಂರಕ್ಷಣೆಯಲ್ಲಿ ಒಡಿಶಾ ಅಗ್ರಸ್ಥಾನ ಪಡೆದಿದೆ. ಎರಡನೆಯ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ ಎಂದು ಸೋಮವಾರ ಜಲ ಶಕ್ತಿ ಸಚಿವಾಲಯ ತಿಳಿಸಿದೆ.
ಈ ಪ್ರಶಸ್ತಿ ಪಟ್ಟಿಯಲ್ಲಿ ಪುದುಚೇರಿ ಮತ್ತು ಗುಜರಾತ್ ಜಂಟಿಯಾಗಿ ಮೂರನೆಯ ಸ್ಥಾನ ಪಡೆದಿವೆ. ಭಾರತದಾದ್ಯಂತ ಜಲ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಅತ್ಯುತ್ತಮವಾಗಿ ಮಾಡುವ ರಾಜ್ಯಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಈ ಫಲಿತಾಂಶವನ್ನು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಪ್ರಕಟಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆಯಲ್ಲಿ ಅಕ್ಟೋಬರ್ 22ರಂದು ನಡೆಯಲಿದೆ.
ಜಲ ಸಂರಕ್ಷಣೆಯಲ್ಲಿನ ಒಡಿಶಾದ ಅದ್ಭುತ ಸಾಧನೆಯು 53,000ಕ್ಕೂ ಹೆಚ್ಚು ಜಲ ಸಂರಕ್ಷಣೆ ಮತ್ತು ಕಟ್ಟಡಗಳಲ್ಲಿ ಮಳೆ ಕೊಯ್ಲು ನಿರ್ಮಾಣ ಹಾಗೂ 11,000 ಸಾಂಪ್ರದಾಯಿಕ ಜಲಮೂಲಗಳ ನವೀಕರಣ ಸೇರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರೊಂದಿಗೆ 21,000 ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ಕಿರು ನೀರಾವರಿ ವ್ಯವಸ್ಥೆಯ ಮೂಲಕ 90,900 ಹೆಕ್ಟೇರ್ ಜಮೀನನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ ಹಾಗೂ ಈ ವ್ಯವಸ್ಥೆಯ ಮೂಲಕ 87,000 ರೈತರಿಗೆ ಲಾಭ ಮಾಡಿಕೊಡಲಾಗಿದೆ. ಇದಲ್ಲದೆ ಒಡಿಶಾ ರಾಜ್ಯವು ಅರಣ್ಯೀಕರಣದಲ್ಲೂ ಗಮನಾರ್ಹ ಸಾಧನೆ ಮಾಡಿದ್ದು, 9 ಕೋಟಿ ಗಿಡಗಳ ನೆಡುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಎರಡನೆಯ ಸ್ಥಾನದಲ್ಲಿರುವ ಉತ್ತರ ಪ್ರದೇಶವು ಜಲಜೀವನ್ ಮಿಷನ್ ಯೋಜನೆಯಡಿ ಸಾಧಿಸಿರುವ ಪ್ರಗತಿಗೆ ಶ್ಲಾಘನೆಗೆ ಗುರಿಯಾಗಿದ್ದು, ಈ ಯೋಜನೆಯಡಿ 17,900 ಗ್ರಾಮಗಳಿಗೆ ನಲ್ಲಿ ನೀರು ಸಂಪರ್ಕವನ್ನು ಕಲ್ಪಿಸಲಾಗಿದೆ. ಇದರಿಂದ 1.91 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಲಾಭವಾಗಿದೆ ಎಂದು ಜಲ ಶಕ್ತಿ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಳಚೆ ನೀರು ನಿರ್ವಹಣೆಯಲ್ಲೂ ಗಮನಾರ್ಹ ಸಾಧನೆ ಮಾಡಿರುವ ಉತ್ತರ ಪ್ರದೇಶ, 133 ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳು ಒಟ್ಟಾರೆಯಾಗಿ 4,100 ಎಂಎಲ್ಡಿ ನೀರನ್ನು ಶುದ್ಧೀಕರಿಸುತ್ತಿದ್ದು, ಗಂಗಾ ನದಿಯ ಮಾಲಿನ್ಯ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.