ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣವನ್ನು ಬಲಗೊಳಿಸುವ ಅಗತ್ಯವಿದೆ:ಸುಪ್ರೀಂ

Update: 2023-09-19 16:04 GMT

ಸುಪ್ರೀಂ | Photo: PTI  

ಹೊಸದಿಲ್ಲಿ: ಟಿವಿ ಸುದ್ದಿವಾಹಿನಿಗಳಿಗಾಗಿ ಸ್ವಯಂ ನಿಯಂತ್ರಣ ಕಾರ್ಯವಿಧಾನವನ್ನು ಬಲಗೊಳಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ತಾನು ಬಯಸಿರುವುದಾಗಿ ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಸೋಮವಾರ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಪರಿಷ್ಕೃತ ಸ್ವಯಂ ನಿಯಂತ್ರಣ ಮಾರ್ಗಸೂಚಿಗಳನ್ನು ತರಲು ನ್ಯೂಸ್ ಬ್ರಾಡಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಷಿಯೇಷನ್ (ಎನ್ ಬಿ ಡಿಎ)ಗೆ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿತು.

ಕಳೆದ ತಿಂಗಳು ಕೂಡ ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಕಾರ್ಯವಿಧಾನದ ಕುರಿತು ಬಾಂಬೆ ಉಚ್ಚ ನ್ಯಾಯಾಲಯವು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಪ್ರಶ್ನಿಸಿ ಎನ್ ಬಿ ಡಿ ಎ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾರ್ಯವಿಧಾನದ ನಿಷ್ಪರಿಣಾಮಕಾರಿತ್ವದ ಬಗ್ಗೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ಅಸ್ತಿತ್ವದಲ್ಲಿರುವ ಕಾರ್ಯವಿಧಾನವು ಶಾಸನಬದ್ಧ ಚೌಕಟ್ಟಿನೊಳಗೆ ಮಾನ್ಯತೆಯನ್ನು ಹೊಂದಿಲ್ಲ ಎಂದು ಅದು ಹೇಳಿತ್ತು.

ಈ ಹಿಂದೆ ನಟ ಸುಶಾಂತಸಿಂಗ್ ರಾಜಪೂತ್ ಅವರ ಸಾವಿನ ಪ್ರಕರಣ ಕುರಿತು ಕೆಲವು ಮಾಧ್ಯಮಗಳ ವರದಿಗಾರಿಕೆಯನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯವು, ಮಾಧ್ಯಮಗಳ ವಿಚಾರಣೆಗಳು ನ್ಯಾಯಾಂಗ ನಿಂದನೆಗೆ ಸಮನಾಗಿದೆ ಎಂದು ಎನ್ ಬಿ ಡಿಎಗೆ ತಿಳಿಸಿತ್ತು.

ಉಚ್ಚ ನ್ಯಾಯಾಲಯದ ಅಭಿಪ್ರಾಯಗಳನ್ನು ಎನ್ ಬಿ ಡಿಎ ಪ್ರಶ್ನಿಸಿದಾಗ ಸರ್ವೋಚ್ಚ ನ್ಯಾಯಾಲಯವು ನಿಯಂತ್ರಣ ಸಂಸ್ಥೆಗಳು ಸುದ್ದಿವಾಹಿನಿಗಳಿಗೆ ವಿಧಿಸಿದ ಕೇವಲ ಒಂದು ಲ.ರೂ.ಗಳ ದಂಡವು ಅಷ್ಟೇನೂ ಪರಿಣಾಮಕಾರಿಯಲ್ಲ ಎಂದು ಬೆಟ್ಟು ಮಾಡಿತ್ತು. ಆದರ್ಶಪ್ರಾಯವಾಗಿ ದಂಡವು ಮಾಧ್ಯಮ ಸಂಸ್ಥೆಗಳು ನಿರ್ದಿಷ್ಟ ಕಾರ್ಯಕ್ರಮದಿಂದ ಗಳಿಸುವ ಲಾಭಕ್ಕಿಂತ ಹೆಚ್ಚಿನದಾಗಿರಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು.

ಸಂಘದ ಅರ್ಜಿಗೆ ಉತ್ತರಿಸುವಂತೆ ಕೇಂದ್ರ ಮತ್ತು ಇತರರಿಗೆ ನೋಟಿಸನ್ನೂ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿತ್ತು.

ಸೋಮವಾರ ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು,2021 ನ್ಯಾಯಾಲಯದ ಎಲ್ಲ ಕಳವಳಗಳನ್ನು ಪರಿಹರಿಸುತ್ತವೆ ಎಂದು ತಿಳಿಸಿದರು. ನಿಯಮಗಳು ಮೂರು ಸ್ತರಗಳ ಕಾರ್ಯವಿಧಾನವನ್ನು ರೂಪಿಸಿದ್ದು,ಮೊದಲ ಸ್ತರವು ಸ್ವಯಂ ನಿಯಂತ್ರಣ ಮಟ್ಟದಲ್ಲಿ ಕಾರ್ಯಾಚರಿಸುತ್ತದೆ ಎಂದರು.

ನ್ಯೂಸ್ ಬ್ರಾಡಕಾಸ್ಟರ್ ಫೆಡರೇಷನ್ ಆಫ್ ಇಂಡಿಯಾ ಮಾಹಿತಿ ತಂತ್ರಜ್ಞಾನ ನಿಯಮಗಳಂತೆ ಕೇಂದ್ರದಲ್ಲಿ ನೋಂದಾಯಿಸಲ್ಪಟ್ಟಿರುವ ಏಕೈಕ ನಿಯಂತ್ರಣ ಸಂಸ್ಥೆಯಾಗಿದೆ ಎಂದು ಅದನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಹೇಶ ಜೇಠ್ಮಲಾನಿ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಫೆಡರೇಷನ್ ತನ್ನದೇ ಆದ ಸ್ವಯಂ ನಿಯಂತ್ರಣಗಳನ್ನು ಸಲ್ಲಿಸಲು ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

‘ನಿಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ನಾವು ಇಲ್ಲಿ ಬಗೆಹರಿಸಲು ಸಾಧ್ಯವಿಲ್ಲ ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು,‘ಈ ಅರ್ಜಿಯು ಪ್ರತಿಸ್ಪರ್ಧಿ ಸಂಸ್ಥೆಗಳ ಅಪಸ್ವರಗಳ ನಡುವೆ ಕಳೆದುಹೋಗುವುದನ್ನು ನಾವು ಬಯಸುವುದಿಲ್ಲ. ನಾವು ಅವರ ನಿಯಮಗಳನ್ನು ಪರಿಶೀಲಿಸುತ್ತೇವೆ ಮತ್ತು ನಂತರ ನಿಮ್ಮ ನಿಯಮಗಳನ್ನೂ ಪರಿಶೀಲಿಸುತ್ತೇವೆ ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News