ಎಥೆನಾಲ್ ನಲ್ಲಿ ಚಲಿಸುವ ಹೊಸ ವಾಹನಗಳು ರಸ್ತೆಗೆ: ನಿತಿನ್ ಗಡ್ಕರಿ
ಮುಂಬೈ: ಸಂಪೂರ್ಣವಾಗಿ ಎಥೆನಾಲ್ ನಲ್ಲೇ ಚಲಿಸುವ ನೂತನ ವಾಹನಗಳನ್ನು ರಸ್ತೆಗೆ ಇಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸೋಮವಾರ ನಾಗಪುರದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಇಲೆಕ್ಟ್ರಿಕ್ ವಾಹನವೊಂದನ್ನು ನಿರ್ಮಿಸಿರುವ ಮರ್ಸಿಡಿಸ್ ಬೆಂಝ್ ಕಂಪೆನಿಯ ಅಧ್ಯಕ್ಷರನ್ನು ತಾನು ಇತ್ತೀಚೆಗೆ ಭೇಟಿಯಾಗಿದ್ದೇನೆ ಎಂದು ಹೇಳಿದರು.
‘‘ತಾವು ಭವಿಷ್ಯದಲ್ಲಿ ಮಾತ್ರ ಇಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತೇವೆ ಎಂದು ಅವರು ಹೇಳಿದರು’’ ಎಂದು ಗಡ್ಕರಿ ತಿಳಿಸಿದರು.
‘‘ನಾವು ಸಂಪೂರ್ಣವಾಗಿ ಎಥೆನಾಲ್ ನಲ್ಲಿ ಚಲಿಸುವ ಹೊಸ ವಾಹನಗಳನ್ನು ತರಲಿದ್ದೇವೆ. ಬಜಾಜ್, ಟಿವಿಎಸ್ ಮತ್ತು ಹೀರೋ ಸ್ಕೂಟರ್ ಗಳು 100 ಶೇಕಡ ಎಥೆನಾಲ್ ನಲ್ಲೇ ಚಲಿಸುತ್ತವೆ’’ ಎಂದು ಅವರು ಹೇಳಿದರು. ‘‘ನಾನು ಟೊಯೋಟ ಕಂಪೆನಿಯ ಕಾಮ್ರಿ ಕಾರನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡುತ್ತೇನೆ. ಅದು 100 ಶೇಕಡ ಎಥೆನಾಲ್ ನಲ್ಲೇ ಚಲಿಸುತ್ತದೆ. ಅದು 40 ಶೇ. ವಿದ್ಯುತ್ತನ್ನು ಉತ್ಪಾದಿಸುತ್ತದೆ’’ ಎಂದರು.
‘‘ಎಥೆನಾಲ್ ದರ ಲೀಟರ್ ಗೆ 60 ರೂ. ಪೆಟ್ರೋಲ್ ದರ ಲೀಟರ್ ಗೆ 120 ರೂ. ಎಥೆನಾಲ್ 40 ಶೇ. ವಿದ್ಯುತ್ತನ್ನು ಉತ್ಪಾದಿಸುತ್ತದೆ. ಹಾಗಾಗಿ, ಎಥೆನಾಲ್ ಗೆ ಲೀಟರ್ ಗೆ15 ರೂ. ಖರ್ಚು ಮಾಡಿದಂತೆ ಆಗುತ್ತದೆ’’ ಎಂದು ಗಡ್ಕರಿ ಹೇಳಿಕೊಂಡರು.