ಬಂಧಿತ ಸಚಿವರ ಕುರಿತು ತಮಿಳುನಾಡು ರಾಜ್ಯಪಾಲ ಮತ್ತು ಡಿಎಂಕೆ ನಡುವೆ ಹೊಸ ಜಟಾಪಟಿ: ನಡೆದದ್ದೇನು?

ಡಿಎಂಕೆ ಕಳೆದ ಎಪ್ರಿಲ್ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿತ್ತು. ಸದನವು ಅಂಗೀಕರಿಸಿರುವ ಮಸೂದೆಗಳಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಒಪ್ಪಿಗೆ ನೀಡುವಂತೆ ರಾಜ್ಯಪಾಲರಿಗೆ ಸೂಕ್ತ ಸೂಚನೆಗಳನ್ನು ನೀಡುವಂತೆ ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನಿರ್ಣಯದಲ್ಲಿ ಆಗ್ರಹಿಸಲಾಗಿತ್ತು.

Update: 2023-06-30 16:12 GMT
Editor : Muad | Byline : ವಾರ್ತಾಭಾರತಿ

Photo: PTI

ಹೊಸದಿಲ್ಲಿ,ಜೂ.೩೦: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ಡಿಎಂಕೆ ಸರಕಾರದ ನಡುವೆ ಜಟಾಪಟಿಗಳು ಹೊಸದೇನಲ್ಲ. ಬಂಧನದಲ್ಲಿರುವ ರಾಜ್ಯದ ಸಚಿವ ವಿ.ಸೆಂಥಿಲ್ ಬಾಲಾಜಿ ಕುರಿತಂತೆ ಉಭಯತರ ನಡುವಿನ ಜಟಾಪಟಿ ತೀರ ಇತ್ತೀಚಿನದಾಗಿದೆ. ಬಾಕಿಯಿರುವ ಮಸೂದೆಗಳು,ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರ ವಿದೇಶ ಪ್ರಯಾಣಗಳು,ದ್ರಾವಿಡಿಯನ್ ಮಾದರಿಯ ಆಡಳಿತ ಮತ್ತು ರಾಜ್ಯದ ಹೆಸರಿನ ಕುರಿತು ರವಿಯವರ ಟೀಕೆ ಕುರಿತು ಈ ಹಿಂದೆ ಡಿಎಂಕೆ ಸರಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷಗಳು ಏರ್ಪಟ್ಟಿದ್ದವು.

ಡಿಎಂಕೆ ಕಳೆದ ಎಪ್ರಿಲ್ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿತ್ತು. ಸದನವು ಅಂಗೀಕರಿಸಿರುವ ಮಸೂದೆಗಳಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಒಪ್ಪಿಗೆ ನೀಡುವಂತೆ ರಾಜ್ಯಪಾಲರಿಗೆ ಸೂಕ್ತ ಸೂಚನೆಗಳನ್ನು ನೀಡುವಂತೆ ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನಿರ್ಣಯದಲ್ಲಿ ಆಗ್ರಹಿಸಲಾಗಿತ್ತು.

ರಾಜ್ಯಪಾಲರ ಬಳಿ ಇಂತಹ ೧೦ಕ್ಕೂ ಅಧಿಕ ಮಸೂದೆಗಳು ಬಾಕಿಯುಳಿದಿವೆ ಎನ್ನುವುದು ಆಡಳಿತಾರೂಢ ಡಿಎಂಕೆಯ ಆರೋಪವಾಗಿದೆ. ರಾಜ್ಯಪಾಲರು ಜನತೆಯ ಕಲ್ಯಾಣಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಜನಸ್ನೇಹಿಯಾಗಲು ಸಿದ್ಧರಿಲ್ಲ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.

ಸರಕಾರದ ದಾಳಿಯ ಬಳಿಕ ಇದೀಗ ರಾಜ್ಯಪಾಲರು ಆನ್ಲೈನ್ ಜೂಜಾಟವನ್ನು ನಿಷೇಧಿಸುವ ಮತ್ತು ಇಂಟರ್ನೆಟ್ ಗೇಮ್ಗಳನ್ನು ನಿಯಂತ್ರಿಸುವ ಉದ್ದೇಶಿತ ಕಾನೂನಿಗೆ ಸಹಿ ಹಾಕಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡು ಆರು ತಿಂಗಳಾಗಿದ್ದರೂ ಮಸೂದೆಗೆ ಸಹಿ ಹಾಕದ್ದಕ್ಕೆ ಡಿಎಂಕೆ ರಾಜ್ಯಪಾಲರನ್ನು ಖಂಡಿಸಿತ್ತು. ರಾಜ್ಯಪಾಲರನ್ನು ಸರಕಾರಿ ವಿವಿಗಳ ಕುಲಾಧಿಪತಿ ಹುದ್ದೆಯಿಂದ ತೆಗೆದುಹಾಕಲು ಉದ್ದೇಶಿಸಿರುವ ಮಸೂದೆ ಈಗಲೂ ರವಿಯವರ ಬಳಿ ಬಾಕಿಯುಳಿದಿದೆ.

ವಿಧಾನಸಭೆಯು ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ನೀಡುವ ಅಥವಾ ಅದನ್ನು ತಡೆಹಿಡಿಯುವ ಆಯ್ಕೆ ತನಗಿದೆ ಎಂದು ಪ್ರತಿಪಾದಿಸುವ ಮೂಲಕ ರಾಜ್ಯಪಾಲರು ಈ ಹಿಂದೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದರು.

ಈ ವರ್ಷದ ಜೂ.೪ರಂದು ಚೆನ್ನೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲರು ತನ್ನ ಹೇಳಿಕೆಗಳ ಮೂಲಕ ರಾಜ್ಯದ ಹೆಸರಿನ ಕುರಿತು ವಿವಾದವೊಂದನ್ನು ಹುಟ್ಟುಹಾಕಿದ್ದರು. ಇಲ್ಲಿ ತಮಿಳುನಾಡಿನಲ್ಲಿ ವಿಭಿನ್ನ ರೀತಿಯ ನಿರೂಪಣೆಯನ್ನು ಸೃಷ್ಟಿಸಲಾಗಿದೆ. ಇಡೀ ದೇಶಕ್ಕೆ ಅನ್ವಯಿಸುವ ಪ್ರತಿಯೊಂದನ್ನೂ ತಮಿಳುನಾಡು ಒಪ್ಪಿಕೊಳ್ಳುವುದೇ ಇಲ್ಲ,ಈ ನಿರೂಪಣೆಗಳಲ್ಲಿ ಹೆಚ್ಚಿನವು ಸುಳ್ಳು,ಕಳಪೆ ಮತ್ತು ಕಪೋಲಕಲ್ಪಿತವಾಗಿವೆ. ಸತ್ಯವು ಉಳಿಯಬೇಕು. ಅದನ್ನು ಕರೆಯಲು ತಮಿಳಿಗಂ ಹೆಚ್ಚು ಸೂಕ್ತ ಪದವಾಗುತ್ತದೆ ಎಂದು ಹೇಳಿದ್ದರು.

ಭಾರೀ ಟೀಕೆಗಳ ಬಳಿಕ ರಾಜ್ಯಪಾಲರು ತನ್ನ ‘ತಮಿಳಿಗಂ’ ಹೇಳಿಕೆಯ ಮೂಲಕ ತಾನು ರಾಜ್ಯದ ಹೆಸರನ್ನು ಬದಲಿಸಲು ಸೂಚಿಸಿದ್ದೇನೆ ಎಂದು ನಿರ್ಧರಿಸುವುದು ತಪ್ಪಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದರು.

ಅದೇ ತಿಂಗಳಲ್ಲಿ ರಾಜ್ಯ ಸರಕಾರವು ಸಿದ್ಧಪಡಿಸಿರುವ ಭಾಷಣವನ್ನು ಮಾತ್ರ ದಾಖಲಿಸಿಕೊಳ್ಳಬೇಕು ಮತ್ತು ರಾಜ್ಯಪಾಲರು ಸಾಂಪ್ರದಾಯಿಕ ಭಾಷಣದಲ್ಲಿಯ ಕೆಲವು ವಿಷಯಗಳನ್ನು ಕೈಬಿಟ್ಟು ತಾವು ಸೇರಿಸಿರುವ ಭಾಗಗಳನ್ನು ತೆಗೆದುಹಾಕಬೇಕು ಎಂದು ಸ್ಪೀಕರ್ ಅವರನ್ನು ಕೋರಿಕೊಂಡು ಸ್ಟ್ಯಾಲಿನ್ ನಿರ್ಣಯವನ್ನು ಮಂಡಿಸಿದ ಬಳಿಕ ರವಿ ವಿಧಾನಸಭೆಯಿಂದ ಹೊರನಡೆದಿದ್ದರು.

ಈ ತಿಂಗಳ ಆರಂಭದಲ್ಲಿ ‘ನಾವು ಕೇಳಿಕೊಂಡ ಮಾತ್ರಕ್ಕೆ ಅಥವಾ ಅವರೊಂದಿಗೆ ಮಾತುಕತೆ ನಡೆಸಿದ ಮಾತ್ರಕ್ಕೆ ಹೂಡಿಕೆದಾರರು ಇಲ್ಲಿಗೆ ಬರುವುದಿಲ್ಲ ’ಎಂದು ಹೇಳುವ ಮೂಲಕ ರಾಜ್ಯಪಾಲರು ಮುಖ್ಯಮಂತ್ರಿಗಳ ಒಂಭತ್ತು ದಿನಗಳ ವಿದೇಶ ಪ್ರವಾಸವನ್ನು ಪರೋಕ್ಷವಾಗಿ ಟೀಕಿಸಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ರಾಜ್ಯ ಸರಕಾರವು,‘ರಾಜಕಾರಣಿಯಂತೆ ವರ್ತಿಸುವುದನ್ನು ನಿಲ್ಲಿಸಿ’ ಎಂದು ಅವರಿಗೆ ಕಿವಿಮಾತು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News