ಒಡಿಶಾ | ಅಲೆಮಾರಿ ಕುಟುಂಬದ 5 ಸದಸ್ಯರ ಹತ್ಯೆ ; ಐವರ ಅಪಹರಣ
ರೂರ್ಕೆಲ : ಒಡಿಶಾ ರಾಜ್ಯದ ಸುಂದರಗಢ ಜಿಲ್ಲೆಯ ಕರಮ್ ದಿಹಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅಲೆಮಾರಿ ಕುಟುಂಬವೊಂದರ ಐವರು ಸದಸ್ಯರನ್ನು ವಿರೋಧಿ ಗುಂಪೊಂದು ಹತ್ಯೆ ಮಾಡಿದೆ ಮತ್ತು ಐವರನ್ನು ಅಪಹರಿಸಿದೆ. ಮೃತರ ಪೈಕಿ ಮೂವರು ಮಹಿಳೆಯರು.
ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಅಪಹರಿಸಲಾಗಿದೆ. ಮಂಗಳವಾರ ತಡ ರಾತ್ರಿ ನಡೆದ ದಾಳಿಯಲ್ಲಿ ಇತರ ನಾಲ್ವರು ಮಕ್ಕಳು ಮತ್ತು ಓರ್ವ ಪುರುಷ ಗಾಯಗೊಂಡಿದ್ದಾರೆ.
ದಾಳಿ ನಡೆದಾಗ, ಅಲೆಮಾರಿ ಗುಂಪುಗಳು ವಾಸಿಸುವ ಡೇರೆಯಲ್ಲಿ ಸುಮಾರು 20 ಕುಟುಂಬ ಸದಸ್ಯರು ಇದ್ದರು. ಅಕ್ರಮ ಸಂಬಂಧವೊಂದರ ಹಿನ್ನೆಲೆಯಲ್ಲಿ ಈ ಭೀಕರ ದಾಳಿ ನಡೆದಿದೆ ಎನ್ನಲಾಗಿದೆ.
ಹಂತಕರನ್ನು ಹಿಡಿಯಲು ಮತ್ತು ಅಪಹೃತರನ್ನು ರಕ್ಷಿಸಲು ಸುಂದರಗಢ ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಂತ್ರಸ್ತ ಅಲೆಮಾರಿ ಕುಟುಂಬವು ಜನವಾಸ್ತವ್ಯವಿಲ್ಲದ ಕರಮ್ ದಿಹಿಯಲ್ಲಿ ನಿರ್ಮಿಸಲಾದ ಡೇರೆಯಲ್ಲಿ ವಾಸಿಸುತ್ತಿತ್ತು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ದಿವಾಕರ್ ತಿಳಿಸಿದ್ದಾರೆ.
ಸಂತ್ರಸ್ತರು ಮಲಗಿದ್ದಾಗ ಸುಮಾರು ನಾಲ್ವರಿದ್ದ ಗುಂಪೊಂದು ಈ ಭೀಕರ ಹತ್ಯಾಕಾಂಡ ನಡೆಸಿದೆ ಎಂದು ಗಾಯಾಳುಗಳ ಪೈಕಿ ಒಬ್ಬರಾಗಿರುವ ಅವಿನಾಶ್ ಪವಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪತ್ನಿಯ ಸಹೋದರಿಯೊಂದಿಗೆ ತಾನು ಅಕ್ರಮ ಸಂಬಂಧ ಹೊಂದಿದ್ದು, ಅದುವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಪವಾರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹತ್ಯಾಕಾಂಡದಲ್ಲಿ ತನ್ನ ಭಾವಂದಿರ ಕೈವಾಡ ಇರಬಹುದು ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.