ʼಒಂದು ದೇಶ-ಒಂದು ಚುನಾವಣೆʼ ರಾಷ್ಟ್ರೀಯ ಹಿತಾಸಕ್ತಿಯ ವಿಚಾರ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
ರಾಯ್ ಬರೇಲಿ : “ಒಂದು ದೇಶ, ಒಂದು ಚುನಾವಣೆ” ಸಾಧ್ಯಾಸಾಧ್ಯತೆಗಳನ್ನು ತಿಳಿಯಲು ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಪದ್ಧತಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ ಹಾಗೂ ಅದು ರಾಷ್ಟ್ರದ ಹಿತಾಸಕ್ತಿಯಲ್ಲಿದೆ ಹಾಗೂ ಯಾವುದೇ ನಿರ್ದಿಷ್ಟ ಪಕ್ಷಕ್ಕೂ ಈ ಪದ್ಧತಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಖಾಸಗಿ ಭೇಟಿಗೆ ನಗರಕ್ಕೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. “ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವುದರಿಂದ ಖರ್ಚು ಉಳಿತಾಯದ ಜೊತೆಗೆ ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದಾಗಿದೆ,” ಎಂದು ಅವರು ಹೇಳಿದರು.
“ಇದು ರಾಷ್ಟ್ರದ ಹಿತಾಸಕ್ತಿಯ ವಿಚಾರವಾಗಿರುವುದರಿಂದ ಎಲ್ಲಾ ಪಕ್ಷಗಳೂ ಸಹಕರಿಸಬೇಕೆಂದು ಕೋರುತ್ತೇನೆ,” ಎಂದು ಅವರು ಹೇಳಿದರು.
“ಸಂಸದೀಯ ಸಮಿತಿ, ನೀತಿ ಆಯೋಗ, ಚುನಾವಣಾ ಆಯೋಗ ಮತ್ತಿತರ ಸಮಿತಿಗಳು ಹಾಗೂ ಸಂಸ್ಥೆಗಳು ಕೂಡ ಒಂದು ದೇಶ ಒಂದು ಚುನಾವಣೆ ಪದ್ಧತಿಯನ್ನು ಮರುಜಾರಿಗೊಳಿಸಬೇಕೆಂಬ ಅಭಿಪ್ರಾಯ ಹೊಂದಿವೆ. ನಾವು ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ. ಈ ವ್ಯವಸ್ಥೆಯನ್ನು ಹೇಗೆ ಜಾರಿಗೊಳಿಸಬಹುದೆಂದು ಸರ್ಕಾರಕ್ಕೆ ಸಲಹೆ ನೀಡುತ್ತೇವೆ. ಎಲ್ಲಾ ಪಕ್ಷಗಳನ್ನೂ ಸಂಪರ್ಕಿಸಿ ಅವರ ಸಲಹೆ ಕೇಳಿದ್ದೇವೆ. ಒಂದು ಹಂತದಲ್ಲಿ ಎಲ್ಲರೂ ಬೆಂಬಲಿಸಿದ್ದಾರೆ. ಎಲ್ಲಾ ಪಕ್ಷಗಳೂ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಸಹಕರಿಸಬೇಕು,” ಎಂದು ಅವರು ಹೇಳಿದರು.