ಅಮೆರಿಕದಿಂದ ಅಕ್ರಮ ಭಾರತೀಯ ವಲಸಿಗರ ಗಡಿಪಾರು ಕುರಿತು ಸರಕಾರದ ಮೌನಕ್ಕೆ ಪ್ರತಿಪಕ್ಷಗಳ ಆಕ್ರೋಶ
PC - PTI
ಹೊಸದಿಲ್ಲಿ: ಅಮೆರಿಕದಲ್ಲಿ ಕಾನೂನುಬಾಹಿರವಾಗಿ ನೆಲೆಸಿದ್ದ ಭಾರತೀಯರನ್ನು ಗಡಿಪಾರು ಮಾಡಿದ ರೀತಿಗಾಗಿ ಗುರುವಾರ ಸರಕಾರವನ್ನು ತರಾಟೆಗೆತ್ತಿಕೊಂಡ ಹಲವಾರು ಪ್ರತಿಪಕ್ಷ ಸಂಸದರು,ಅವರನ್ನು ಅವಹೇಳನಕಾರಿಯಾಗಿ ನಡೆಸಿಕೊಂಡಿದ್ದನ್ನು ಪ್ರಶ್ನಿಸಿದರು.
104 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದ ಮಿಲಿಟರಿ ವಿಮಾನವು ಬುಧವಾರ ಅಮೃತಸರಕ್ಕೆ ಕರೆತಂದಿದ್ದು,ಇದು ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿರುವ ಡೊನಾಲ್ಡ್ ಟ್ರಂಪ್ ಸರಕಾರವು ಗಡಿಪಾರು ಮಾಡಿರುವ ಭಾರತಿಯರ ಮೊದಲ ತಂಡವಾಗಿದೆ. ಪ್ರಯಾಣದುದ್ದಕ್ಕೂ ತಮ್ಮ ಕೈಕಾಲುಗಳಿಗೆ ಕೋಳಗಳನ್ನು ತೊಡಿಸಲಾಗಿತ್ತು ಮತ್ತು ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕವಷ್ಟೇ ತಮ್ಮನ್ನು ಬಂಧಮುಕ್ತಗೊಳಿಸಲಾಗಿತ್ತು ಎಂದು ಗಡಿಪಾರುಗೊಂಡಿರುವವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಸ್ಪಿ ನಾಯಕ ಅಖಿಲೇಶ ಯಾದವ ಸೇರಿದಂತೆ ಪ್ರತಿಪಕ್ಷ ಸಂಸದರು ಭಾರತೀಯರೊಂದಿಗೆ ಅಮೆರಿಕದ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಸಂಸತ್ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು. ಕೆಲವು ಪ್ರತಿಪಕ್ಷ ನಾಯಕರು ಕೈಕೋಳಗಳನ್ನು ಧರಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಪಕ್ಷಗಳ ದಾಳಿಯ ನಡುವೆಯೇ ಕೇಂದ್ರ ಸಚಿವ ಚಿರಾಗ ಪಾಸ್ವಾನ್ ಅವರು, ಸರಕಾರವು ಸೂಕ್ತ ಸಮಯದಲ್ಲಿ ತನ್ನ ಅಭಿಪ್ರಾಯಗಳನ್ನು ಮಂಡಿಸಲಿದೆ. ಇದು ನೀತಿ ನಿರ್ಧಾರದ ವಿಷಯವಾಗಿದೆ ಮತ್ತು ಪ್ರತಿಪಕ್ಷಗಳು ಇದನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದರು.
ಸಂಸತ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸರಕಾರವನ್ನು ತರಾಟೆಗೆತ್ತಿಕೊಂಡ ಕಾಂಗ್ರೆಸ್ ನಾಯಕ ಗೌರವ ಗೊಗೊಯಿ ಅವರು,’ಭಾರತೀಯರನ್ನು ವಾಪಸ್ ಕರೆ ತಂದಿರುವ ರೀತಿಯು ಭಾರತ ಸರಕಾರದ ದೌರ್ಬಲ್ಯವನ್ನು ತೋರಿಸುತ್ತಿದೆ. ಮಹಿಳೆಯರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗಿದೆ ಮತ್ತು ಕೈಕೋಳಗಳನ್ನು ತೊಡಿಸಿ ವಾಪಸ್ ಕರೆತರಲಾಗಿದೆ. ದೇಶಕ್ಕೆ ಮಾಡಿರುವ ಈ ಅವಮಾನವನ್ನು ನಾವು ಸಹಿಸುವುದಿಲ್ಲ’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಸ್ಥಾನಮಾನಕ್ಕಿಂತ ತನ್ನ ವೈಯಕ್ತಿಕ ಪ್ರತಿಷ್ಠೆ ಹೆಚ್ಚು ಮುಖ್ಯವಾಗಿದೆ ಎಂದು ಆರೋಪಿಸಿದ ಅವರು,ಇದೊಂದು ಕರಾಳ ದಿನ. ಪ್ರಧಾನಿಯವರು ಮೌನವಾಗಿದ್ದಾರೆ ಎಂದರು.
ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳು ಏಕೆ ಸೂಕ್ತವಾಗಿ ಬಳಕೆಯಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ಇನ್ನೋರ್ವ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ ಅವರು,ಈ ವಿಷಯದ ಕುರಿತು ನಾವು ಸಂಸತ್ತಿನಲ್ಲಿ ನಿಲುವಳಿ ಸೂಚನೆಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
‘ಅಮೆರಿಕವು ತನ್ನ ದೇಶದಲ್ಲಿ ಅಕ್ರಮವಾಗಿ ವಾಸವಾಗಿರುವ ಜನರನ್ನು ಗಡಿಪಾರು ಮಾಡುವ ಕಾನೂನುಬದ್ಧ ಹಕ್ಕನ್ನು ಹೊಂದಿದೆ,ಆದರೆ ವಲಸಿಗರನ್ನು ಅದು ಮರಳಿ ಕಳುಹಿಸಿರುವ ರೀತಿಯನ್ನು ನಾವು ಪ್ರತಿಭಟಿಸುತ್ತಿದ್ದೇವೆ ’ಎಂದು ಹೇಳಿದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ಈ ಉದ್ದೇಶಕ್ಕಾಗಿ ನಾಗರಿಕ ವಿಮಾನವನ್ನು ಬಳಸಬೇಕು ಎಂದರು.
ಭಾರತೀಯ ವಲಸಿಗರನ್ನು ವಾಪಸ್ ಕಳುಹಿಸಿದ ರೀತಿಯನ್ನು ಪ್ರಶ್ನಿಸಿದ ಟಿಎಂಸಿ ಸಂಸದ ಕೀರ್ತಿ ಆಝಾದ್ ಅವರು,ಇದೊಂದು ನೋವಿನ ಘಟನೆಯಾಗಿದೆ ಎಂದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28