ರಾಜ್ಯ ಸರಕಾರಗಳಿಂದ ವಕ್ಫ್ ಆಸ್ತಿ ವಿವರ ಕೇಳಿದ ಜಂಟಿ ಸಂಸದೀಯ ಸಮಿತಿ
ಹೊಸದಿಲ್ಲಿ : ವಕ್ಫ್ ಆಸ್ತಿಗಳನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಸಾಚಾರ್ ಸಮಿತಿ ವರದಿಯ ಸತ್ಯಾಸತ್ಯತೆ ಹಾಗೂ ಪರಿಷ್ಕೃತ ವಿವರಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ ವಿವಿಧ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ವಕ್ಫ್ ಕಾಯ್ದೆಯ ಸೆಕ್ಷನ್ 40ನ್ನು ಬಳಸಿಕೊಂಡು ವಕ್ಫ್ ಮಂಡಳಿಗಳು ಹಕ್ಕು ಸಾಧಿಸಿರುವ ಆಸ್ತಿಗಳ ವಿವರಗಳನ್ನು ಕೂಡ ಸಮಿತಿ ರಾಜ್ಯ ಸರಕಾರಗಳಿಂದ ಕೋರಿದೆ. 2005-06ರಲ್ಲಿ ರಾಜ್ಯದ ವಿವಿಧ ವಕ್ಫ್ ಮಂಡಳಿಗಳು ಅನಧಿಕೃತ ಸ್ವಾಧೀನದ ಕುರಿತು ಸಾಚಾರ್ ಸಮಿತಿಗೆ ಮಾಹಿತಿ ನೀಡಿದ್ದವು.
ಸಮಿತಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೂಲಕ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಂತಹ ಆಸ್ತಿಗಳು ದಿಲ್ಲಿಯಲ್ಲಿ 316, ರಾಜಸ್ಥಾನದಲ್ಲಿ 60, ಕರ್ನಾಟಕಲ್ಲಿ 42, ಮಧ್ಯಪ್ರದೇಶದಲ್ಲಿ 53, ಉತ್ತರಪ್ರದೇಶದಲ್ಲಿ 60 ಹಾಗೂ ಒಡಿಶಾದಲ್ಲಿ 53 ಇರುವುದಾಗಿ ಸಾಚಾರ್ ಸಮಿತಿಗೆ ವರದಿ ಮಾಡಿರುವುದನ್ನು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅಧ್ಯಕ್ಷರಾಗಿರುವ ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿ ಗಮನಿಸಿದೆ.
ಸಮಿತಿ ಈ ಎಲ್ಲಾ 6 ರಾಜ್ಯಗಳಿಂದ ಪರಿಷ್ಕೃತ ಮಾಹಿತಿ ಕೋರಿದೆ. ಇತರ ಹಲವು ರಾಜ್ಯಗಳಿಂದ ಮಾಹಿತಿಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.