ದಯವಿಟ್ಟು ಜೀವ ವಿಮೆ ಹಾಗೂ ವೈದ್ಯಕೀಯ ವಿಮೆ ಮೇಲಿನ ಜಿಎಸ್ಟಿ ತೆಗೆದು ಹಾಕಿ: ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದ ನಿತಿನ್ ಗಡ್ಕರಿ
ಹೊಸದಿಲ್ಲಿ: ಜೀವ ವಿಮೆ ಹಾಗೂ ವೈದ್ಯಕೀಯ ವಿಮೆ ಮೇಲೆ ವಿಧಿಸಲಾಗಿರುವ ಶೇ. 18ರಷ್ಟು ಜಿಎಸ್ಟಿಬಯನ್ನು ತೆಗೆದು ಹಾಕಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಅನಿಶ್ಚಿತ ಜೀವನದ ಮೇಲೆ ಈ ತೆರಿಗೆಯು ಹೊರೆಯಾಗಿದ್ದು, ಇದರಿಂದ ಈ ವಲಯದ ಬೆಳವಣಿಗೆಗೆ ತೊಡಕುಂಟಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಜುಲೈ 28ರಂದು ಬರೆದಿರುವ ಪತ್ರದಲ್ಲಿ, “ಜೀವ ವಿಮೆ ಹಾಗೂ ವೈದ್ಯಕೀಯ ವಿಮೆ ಕಂತಿನ ಮೇಲಿನ ಜಿಎಸ್ಟಿಯನ್ನು ಆದ್ಯತೆಯ ಮೇರೆಗೆ ಹಿಂಪಡೆಯಬೇಕು ಎಂಬ ಸಲಹೆಯನ್ನು ನೀವು ಪರಿಗಣಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಇದರಿಂದಾಗಿ ಹಿರಿಯ ನಾಗರಿಕ ಪಾಲಿಗೆ ಹೊರೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಜೀವ ವಿಮೆ ಹಾಗೂ ವೈದ್ಯಕೀಯ ವಿಮೆಗಳ ಕಂತು ಶೇ. 18ರಷ್ಟು ಜಿಎಸ್ಟಿಗೆ ಒಳಪಟ್ಟಿವೆ.
“ಇದೇ ರೀತಿ, ಸಾಮಾಜಿಕವಾಗಿ ಅತ್ಯಗತ್ಯವಾಗಿರುವ ವೈದ್ಯಕೀಯ ವಿಮೆ ಕಂತಿನ ಮೇಲೆ ವಿಧಿಸಲಾಗಿರುವ ಶೇ. 18ರಷ್ಟು ಜಿಎಸ್ಟಿಯಿಂದ ಈ ವಲಯದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ” ಎಂದೂ ಪತ್ರದಲ್ಲಿ ವಿವರಿಸಲಾಗಿದೆ.
ಈ ಕುರಿತು ಕಳವಳ ವ್ಯಕ್ತಪಡಿಸಿದ್ದ ನಾಗಪುರ ವಿಭಾಗೀಯ ಜೀವ ವಿಮಾ ನಿಗಮದ ಉದ್ಯೋಗಿಗಳ ಸಂಘಟನೆಯು, ಇದರಿಂದ ಜೀವ ವಿಮಾ ಉದ್ಯಮವು ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದರು. ನಿತಿನ್ ಗಡ್ಕರಿ ಇದನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತೆರಿಗೆ ಮಾರ್ಪಾಡು ಕುರಿತು ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆ ಹೊಂದಿರುವ ಜಿಎಸ್ಟಿ ಮಂಡಳಿಯು ಆಗಸ್ಟ್ ನಲ್ಲಿ ಸಭೆ ಸೇರಲಿದೆ. ಈ ಹಿಂದಿನ ಸಭೆಯು ಜೂನ್ 22ರಂದು ನಡೆದಿತ್ತು.
ವೈದ್ಯಕೀಯ ವಿಮಾ ಕಂತಿನ ಮೇಲೆ ವಿಧಿಸಲಾಗುತ್ತಿರುವ ಜಿಎಸ್ಟಿ ದರದ ಕುರಿತು ಪುನರ್ ವಿಮರ್ಶೆ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಸಲ್ಲಿಸಲಾಗಿತ್ತು.