"ತನಿಖಾ ಸಂಸ್ಥೆಗಳ ಸೇಡಿನ ಕ್ರಮ": ಮಹಮ್ಮದ್ ಝುಬೈರ್ ವಿರುದ್ಧದ ಎಫ್ಐಆರ್ ಹಿಂಪಡೆಯುವಂತೆ ಪತ್ರಿಕಾ ಸಂಸ್ಥೆಗಳ ಆಗ್ರಹ

Update: 2024-11-29 07:15 GMT

ಮಹಮ್ಮದ್ ಝುಬೈರ್ 

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಝುಬೈರ್ ವಿರುದ್ಧ ಸೆಕ್ಷನ್ 152ರ ಅಡಿಯಲ್ಲಿ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ಆರೋಪದಲ್ಲಿ ಉತ್ತರಪ್ರದೇಶದ ಪೊಲೀಸರು ದಾಖಲಿಸಿರುವ ಎಫ್ ಐಆರ್  ಹಿಂಪಡೆಯಬೇಕೆಂದು ಹಲವು ಪತ್ರಿಕಾ ಸಂಸ್ಥೆಗಳು ಆಗ್ರಹಿಸಿದೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾ ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಎಲ್ಲಾ ವಿವೇಕಯುತ ಮನಸ್ಸುಗಳು ಭಾರತೀಯ ನ್ಯಾಯ ಸಂಹಿತೆಯ ಸೆಕ್ಸನ್ 152ನ್ನು ವಿರೋಧಿಸುತ್ತಿವೆ. ಏಕೆಂದರೆ ಈ ಕಾಯ್ದೆಯು ಸ್ವತಂತ್ರ ಚಿಂತಕರು ಮತ್ತು ಮಾಧ್ಯಮಗಳನ್ನು ಮೌನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಟೀಕಾಕಾರ ವಿರುದ್ಧವೂ ಈ ಸೆಕ್ಸನ್ ನ್ನು ವಿಧಿಸಬಹುದು ಎಂದು ಹೇಳಿದೆ.

ಸೆಕ್ಷನ್ 152, ದೇಶದ್ರೋಹದ ಕಾನೂನಿನ "ಹೊಸ ಅವತಾರ" ಎಂದು ಹೇಳಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಹಲವಾರು ಪ್ರಕರಣಗಳಲ್ಲಿ ಈ ಸೆಕ್ಸನ್ ನ ನಿಬಂಧನೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಡಿಜಿಟಲ್ ಸುದ್ದಿ ಸಂಸ್ಥೆಗಳ ಸಂಘವಾದ DIGIPUB ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಝಬೈರ್ ಗೆ ಕಿರುಕುಳ ನೀಡಲಾಗುತ್ತಿದೆ. ಝಬೈರ್ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ ಮತ್ತು ಇದು ತನಿಖಾ ಸಂಸ್ಥೆಗಳ ಸೇಡಿನ ಮತ್ತು ವಿವೇಚನಾರಹಿತ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣಗಳನ್ನು ಮತ್ತು ದ್ವೇಷ ಭಾಷಣ ಮಾಡುವವರನ್ನು ಹೈಲೈಟ್ ಮಾಡುವ ಪತ್ರಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಉದ್ದೇಶವಿದೆಯೇ ಎಂದು DIGIPUB ಪ್ರಶ್ನಿಸಿದೆ. ಝುಬೈರ್ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಬೇಕು, ದ್ವೇಷದ ಪ್ರಚಾರಕರನ್ನು ಪರಿಣಾಮಕಾರಿಯಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಯತಿ ನರಸಿಮಹಾನಂದ ಸರಸ್ವತಿ ಫೌಂಡೇಶನ್‌ ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಗಾಝಿಯಾಬಾದ್‌ ನ ಕವಿನಗರ ಪೊಲೀಸರಿಗೆ ದೂರು ನೀಡಿದ ನಂತರ ಝುಬೈರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ, ಮುಸ್ಲಿಮರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಉದ್ದೇಶದಿಂದ ನರಸಿಂಹಾನಂದ ಅವರ ಹಳೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಘಾಝಿಯಾಬಾದ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 196, 228, 299, 356(3) ಹಾಗೂ 351(2) ಅಡಿ ಮುಹಮ್ಮದ್ ಝುಬೈರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಯತಿ ನರಸಿಂಗಾನಂದರ ಪುನರಾವರ್ತಿತ ಕೋಮುವಾದಿ ಹೇಳಿಕೆಗಳು ಹಾಗೂ ಮಹಿಳೆಯರು ಮತ್ತು ಹಿರಿಯ ರಾಜಕಾರಣಿಗಳ ವಿರುದ್ಧದ ಅವಹೇಳನಕಾರಿ ಹೇಳಿಕೆಗಳ ಕುರಿತು ಬೆಳಕು ಚೆಲ್ಲಲು ನಾನು ಅವರ ಭಾಷಣವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ಅಲಹಾಬಾದ್ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಹಮ್ಮದ್ ಝುಬೈರ್ ಪ್ರತಿಪಾದಿಸಿದ್ದಾರೆ.

ಹಿಂದುತ್ವವಾದಿ ಯತಿ ನರಸಿಂಹಾನಂದ್ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಅ.7ರಂದು ಝುಬೈರ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅಪರಾಧವನ್ನು ಸೇರಿಸಲಾಗಿದೆ ಎಂದು ಪೊಲೀಸರು ಬುಧವಾರ ಅಲಹಾಬಾದ್ ಹೈಕೋರ್ಟ್‌ ಗೆ ತಿಳಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News