ಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿಗೆ ಮನೆ ಮಾರಾಟ ಮಾಡುವುದಕ್ಕೆ ವಿರೋಧಿಸಿ ಭುಗಿಲೆದ್ದ ಪ್ರತಿಭಟನೆ

Update: 2024-12-05 09:51 GMT

Screengrab:X/@HateDetectors

ಮೊರಾದಾಬಾದ್: ಮುಸ್ಲಿಂ ವ್ಯಕ್ತಿಗೆ ಮನೆ ಮಾರಾಟ ಮಾಡದಂತೆ ವಿರೋಧ ವ್ಯಕ್ತಪಡಿಸಿ ಉತ್ತರ ಪ್ರದೇಶದ ಐಷಾರಾಮಿ ʼಟಿಡಿಐ ಸೊಸೈಟಿʼಯಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ಐಷಾರಾಮಿ ಟಿಡಿಐ ಸೊಸೈಟಿಯಲ್ಲಿ ಡಾ. ಅಶೋಕ್ ಬಜಾಜ್ ಎಂಬವರು ತನ್ನ ಮನೆಯನ್ನು ವೈದ್ಯರಾದ ಡಾ.ಇಕ್ರಾ ಚೌಧರಿಗೆ ಮಾರಾಟ ಮಾಡಿದ್ದಾರೆ. ಇಲ್ಲಿನ ಮನೆಗಳನ್ನು ಮುಸ್ಲಿಮರಿಗೆ ಮಾರಾಟ ಮಾಡಬಾರದೆಂದು ಹೌಸಿಂಗ್ ಸೊಸೈಟಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ನಿವಾಸಿಗಳು ಕಾಲೋನಿ ಗೇಟ್‌ ನಲ್ಲಿ ʼಅಶೋಕ್ ಬಜಾಜ್ ಅವರೇ ನಿಮ್ಮ ಮನೆಯನ್ನು ವಾಪಾಸ್ಸು ಪಡೆದುಕೊಳ್ಳಿʼ ಎಂಬ ಬ್ಯಾನರ್‌ ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದು ಹಿಂದೂ ಸಮಾಜ ವಾಸಿಸುವ ಕಾಲೋನಿಯಾಗಿದೆ. 400ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಅನ್ಯ ಸಮುದಾಯದವರು ಇಲ್ಲಿ ನೆಲೆಸುವುದಕ್ಕೆ ನಮ್ಮ ವಿರೋಧವಿದೆ. ಮನೆಯು ದೇವಸ್ಥಾನದ ಸಮೀಪವಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಟಿಡಿಐ ಸಿಟಿ ಸೊಸೈಟಿ ಅಧ್ಯಕ್ಷ ಅಮಿತ್ ವರ್ಮಾ ಪ್ರತಿಭಟನಾಕಾರರ ಜೊತೆ ಸೇರಿಕೊಂಡಿದ್ದಾರೆ. ಮುಸ್ಲಿಮರಿಗೆ ಮನೆ ಮಾರಾಟ ಮಾಡುವುದರಿಂದ ಕಾಲೋನಿಯ ಸ್ವರೂಪ ಬದಲಾಗಬಹುದು. ಇತರ ಸಮುದಾಯಗಳು ಅಲ್ಲಿ ಬಂದು ನೆಲೆಸಲು ಪ್ರಾರಂಭಿಸಿದರೆ, ಹಿಂದೂಗಳು ಕಾಲೋನಿ ಬಿಡಲು ಪ್ರಾರಂಭಿಸಿದರೆ ಅನಗತ್ಯವಾಗಿ ಬದಲಾವಣೆಯಾಗಬಹುದು ಎಂದು ನಾವು ಭಯಪಡುತ್ತೇವೆ ಎಂದು ವ್ಯಕ್ತಿಯೋರ್ವರು ಹೇಳಿದ್ದಾರೆ.

ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಮನೆ ಮಾರಾಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದೂ ಸಮಾಜದ ಸದಸ್ಯರು ದೂರು ದಾಖಲಿಸಿದ್ದಾರೆ. ನಾವು ಈ ಬಗ್ಗೆ ಮಾತುಕತೆಯನ್ನು ನಡೆಸುತ್ತೇವೆ ಮತ್ತು ಸರ್ವಾನುಮತದ, ಸೌಹಾರ್ದಯುತ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News