ಶಿಕ್ಷೆಗೆ ಸುಪ್ರೀಂ ತಡೆಯಾಜ್ಞೆ: ರಾಹುಲ್‌ ಗಾಂಧಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ

Update: 2023-08-04 10:07 GMT

ರಾಹುಲ್‌ ಗಾಂಧಿ

ಹೊಸದಿಲ್ಲಿ: ಮೋದಿ ಉಪನಾಮೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದ ಆದೇಶಕ್ಕೆ ಇಂದು ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ಅದೇ ಸಮಯ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯಾಗಿ ಅವರ ಈ ಹೇಳಿಕೆ ಉತ್ತಮ ಅಭಿರುಚಿಯಿಂದ ಕೂಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸುಪ್ರೀಂ ಕೋರ್ಟ್‌ ಆದೇಶದ ನಂತರ ಈಗ ರಾಹುಲ್‌ ಗಾಂಧಿಗೆ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಅಂತೆಯೇ ಅವರು ಲೋಕಸಭೆಗೆ ವಾಪಸಾಗಬಹುದಾಗಿದೆ.

ಲೋಕಸಭಾ ಸೆಕ್ರಟೇರಿಯಟ್‌ ಪ್ರಕಾರ ರಾಹುಲ್‌ ಗಾಂಧಿ ಸೋಮವಾರದಿಂದ ಸಂಸತ್ತಿಗೆ ಹಾಜರಾಗಬಹುದು. ಆದರೆ ಸೆಕ್ರಟೇರಿಯಟ್‌ ಈ ಕುರಿತು ನೋಟಿಸ್‌ ಜಾರಿಗೊಳಿಸಬೇಕು.

“ಸುಪ್ರೀಂ ಕೋರ್ಟ್‌ ನಿರ್ಧಾರದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ರಾಹುಲ್‌ ಗಾಂಧಿ ಅವರ ಅಮಾನತನ್ನು ವಾಪಸ್‌ ಪಡೆಯಲಾಗಿದೆ ಎಂದು ನೋಟಿಸ್‌ ಹೇಳಲಿದೆ. ಆದರೆ ಇದನ್ನು ಹೊರಡಿಸುವ ತನಕ ಅವರು ಸಂಸತ್ತಿಗೆ ಬರುವ ಹಾಗಿಲ್ಲ,” ಎಂದು ಸೆಕ್ರಟೇರಿಯಟ್‌ ಹೇಳಿದೆ.

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದಲ್ಲಿ ಗರಿಷ್ಠ ಎರಡು ವರ್ಷ ಶಿಕ್ಷೆ ವಿಧಿಸಿದ್ದರು, ಆದರೆ ಈ ಶಿಕ್ಷೆ ಒಂದು ದಿನ ಕಡಿಮೆಯಾಗಿದ್ದರೂ ಸಂಸದನ ಸ್ಥಾನದಿಂದ ಅನರ್ಹಗೊಳ್ಳಲ್ಪಡುವ ಪ್ರಮೇಯ ಎದುರಾಗುತ್ತಿರಲಿಲ್ಲ ಏಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರ ಮಾತುಗಳು ಉತ್ತಮ ಅಭಿರುಚಿಯಿಂದ ಕೂಡಿರಲಿಲ್ಲ ಎಂಬುದು ನಿಸ್ಸಂಶಯ, ಅವರು ಭಾಷಣಗಳನ್ನು ಮಾಡುವಾಗ ಎಚ್ಚರಿಕೆಯಿಂದಿರಬೇಕಿತ್ತು, ಅನರ್ಹತೆಯ ಪರಿಣಾಮಗಳು ಒಬ್ಬ ವ್ಯಕ್ತಿಯ ಹಕ್ಕುಗಳನ್ನು ಮಾತ್ರ ಬಾಧಿಸದೆ ಮತದಾರರನ್ನೂ ಬಾಧಿಸುತ್ತದೆ,” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಪ್ರಕರಣದಲ್ಲಿ ಖುಲಾಸೆಗೆ ಇರುವ ಕೊನೆಯ ಅವಕಾಶ ಇದಾಗಿದೆ, ಇದು ಅವರಿಗೆ ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಲು ಮತ್ತು ಚುನಾವಣೆ ಸ್ಪರ್ಧಿಸಲು ಅವಕಾಶ ಕಲ್ಪಿಸುತ್ತದೆ ಎಂದು ರಾಹುಲ್‌ ಪರ ವಕೀಲರು ತಮ್ಮ ವಾದ ಮಂಡನೆಯಲ್ಲಿ ಹೇಳಿದರಲ್ಲದೆ ಹೈಕೋರ್ಟ್‌ ತನ್ನ ತೀರ್ಪನ್ನು 66 ದಿನಗಳ ಕಾಲ ಕಾಯ್ದಿರಿಸಿದ್ದರಿಂದ ಹಾಗೂ ರಾಹುಲ್‌ ಗಾಂಧಿ ಅವರು ಈಗಾಗಲೇ ಎರಡು ಸಂಸತ್‌ ಅಧಿವೇಶನಗಳನ್ನು ಕಳೆದುಕೊಂಡಿದ್ದಾರೆಂದು ಅವರ ವಕೀಲರು ಹೇಳಿದರು.

ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪಿ ಎಸ್‌ ನರಸಿಂಹ ಮತ್ತು ಸಂಜಯ್‌ ಕುಮಾರ್‌ ಅವರ ಪೀಠ ರಾಹುಲ್‌ ಗಾಂಧಿ ಅವರು ತಮ್ಮನ್ನು ದೋಷಿಯೆಂದು ಘೋಷಿಸಲಾಗಿದ್ದ ಆದೇಶಕ್ಕೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಸಿತು. ಗುಜರಾತ್‌ ಹೈಕೋರ್ಟ್‌ ಈ ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ಅವರನ್ನು ದೋಷಿಯೆಂದು ಘೋಷಿಸಿದ ಆದೇಶಕ್ಕೆ ತಡೆ ಕೋರಲು ನಿರಾಕರಿಸಿತ್ತು.

ರಾಹುಲ್‌ ಗಾಂಧಿ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದಿಸಿದ್ದರು.

►ಈ ಪ್ರಕರಣದಲ್ಲಿ ಕೆಳಗಿನ ಹಂತದ ನ್ಯಾಯಾಲಯ ರಾಹುಲ್‌ ಅವರನ್ನು ಅಪರಾಧಿ ಎಂದು ಘೋಷಿಸಿದ ಆದೇಶಕ್ಕೆ ತಡೆ ಹೋರಲು ಇದು ಅಪರೂಪದ ಪ್ರಕರಣವಾಗಿರಬೇಕು ಎಂದು ಜಸ್ಟಿಸ್‌ ಗವಾಯಿ ಹೇಳಿದಾಗ ಉತ್ತರಿಸಿದ ಸಿಂಘ್ವಿ ದೂರುದಾರ ಪೂರ್ಣೇಶ್‌ ಮೋದಿಯ ಮೂಲ ಉಪನಾಮೆ ಮೋದಿ ಅಲ್ಲ, ಆತ ಅದನ್ನು ಬದಲಾಯಿಸಿದ್ದರು ಎಂದು ಹೇಳಿದರು.

► “ದೂರುದಾರ ಪೂರ್ಣೇಶ್‌ ಮೋದಿ ಸ್ವತಃ ತಮ್ಮ ಮೂಲ ಉಪನಾಮೆ ಮೋದಿ ಅಲ್ಲ, ತಾವು ಮೋಧ್‌ ವನಿಕಾ ಸಮಾಜಕ್ಕೆ ಸೇರಿದವರೆಂದು ಹೇಳಿದ್ದರು,” ಎಂದು ಸಿಂಘ್ವಿ ಹೇಳಿದರಲ್ಲದೆ ಭಾಷಣದಲ್ಲಿ ರಾಹುಲ್‌ ಉಲ್ಲೇಖಿಸಿದ ಯಾವುದೇ ವ್ಯಕ್ತಿ ದೂರು ದಾಖಲಿಸಿಲ್ಲ ಎಂದರು.

► ಇಂತಹ ಪ್ರಕರಣದಲ್ಲಿ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿದ ಒಂದೇ ಒಂದು ಹಿಂದಿನ ಪ್ರಕರಣವಿಲ್ಲ ಎಂದೂ ಸಿಂಘ್ವಿ ಹೇಳಿದರು.

► ರಾಹುಲ್‌ ಗಾಂಧಿ ಅವರು ಎಪ್ರಿಲ್‌ 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಟೀಕಿಸಿ,” ಅದು ಹೇಗೆ ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮೆಯಿದೆ?,” ಎಂದು ಪ್ರಶ್ನಿಸಿದ್ದರು.

► ತಮ್ಮನ್ನು ದೋಷಿ ಎಂದು ಘೋಷಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಹಲ್‌ ಗಾಂಧಿ ಸೂರತ್‌ ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ ಅದಿನ್ನೂ ಬಾಕಿಯಿದೆ.

► 2019ರಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತಮ್ಮ ವಿರುದ್ಧ ಈ ಮಾನನಷ್ಟ ಪ್ರಕರಣದಲ್ಲಿ ಹೊರಡಿಸಿದ ಆದೇಶವು ತಮ್ಮನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸುವಂತೆ ಮಾಡುವ ರೀತಿಯ ಶಿಕ್ಷೆ ವಿಧಿಸಿತ್ತು. ವಿಚಾರಣಾ ನ್ಯಾಯಾಲಯವು ತಮ್ಮನ್ನು ಕಠಿಣವಾಗಿ ನಡೆಸಿಕೊಂಡಿತ್ತು ಎಂದು ರಾಹುಲ್‌ ದೂರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News