ಲೋಕಸಭೆಯಲ್ಲಿ ರೈಲ್ವೆ ತಿದ್ದುಪಡಿ ಮಸೂದೆ ಮಂಡನೆ
ಹೊಸದಿಲ್ಲಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ಮಂಡಳಿಗೆ ಸ್ವಾಯತ್ತ ಅಧಿಕಾರವನ್ನು ಒದಗಿಸುವ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.
ರೈಲ್ವೆ(ತಿದ್ದುಪಡಿ) ಮಸೂದೆ 2024 ರೈಲ್ವೆ ಮಂಡಳಿಗೆ ಕಾರ್ಯ ನಿರ್ವಹಣೆಯನ್ನು ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸಲು ಉದ್ದೇಶಿಸಿದೆ.
ಈ ಮಸೂದೆಯ ಮೂಲಕ ಭಾರತೀಯ ರೈಲ್ವೆ ಮಂಡಳಿ ಕಾಯ್ದೆ,1905ರಲ್ಲಿಯ ಎಲ್ಲ ನಿಬಂಧನೆಗಳನ್ನು ರೈಲ್ವೆ ಕಾಯ್ದೆ, 1989ರಲ್ಲಿ ಸೇರ್ಪಡೆಗೊಳಿಸಲು ಪ್ರಸ್ತಾವಿಸಲಾಗಿದೆ ಎಂದು ವೈಷ್ಣವ್ ತಿಳಿಸಿದರು.
ಸ್ವಾತಂತ್ರ್ಯಪೂರ್ವದಲ್ಲಿ ಲೋಕೋಪಯೋಗಿ ಇಲಾಖೆಯ ಒಂದು ಶಾಖೆಯಾಗಿ ರೈಲ್ವೆ ಜಾಲವನ್ನು ಸ್ಥಾಪಿಸಲಾಗಿತ್ತು. ಜಾಲವು ವಿಸ್ತರಣೆಗೊಂಡಾಗ ವಿವಿಧ ರೈಲ್ವೆ ಕಂಪನಿಗಳ ಸೂಕ್ತ ಕಾರ್ಯ ನಿರ್ವಹಣೆಗಾಗಿ ಭಾರತೀಯ ರೈಲ್ವೆ ಕಾಯ್ದೆ,1890ನ್ನು ತರಲಾಗಿತ್ತು. 1905ರಲ್ಲಿ ರೈಲ್ವೆಯನ್ನು ಲೋಕೋಪಯೋಗಿ ಇಲಾಖೆಯಿಂದ ಪ್ರತ್ಯೇಕಿಸಲಾಗಿತ್ತು ಮತ್ತು ರೈಲ್ವೆ ಮಂಡಳಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು ಎಂದು ಅವರು ತಿಳಿಸಿದರು.
1989ರಲ್ಲಿ ಭಾರತೀಯ ರೈಲ್ವೆ ಕಾಯ್ದೆ,1890ನ್ನು ರದ್ದುಗೊಳಿಸಿ ರೈಲ್ವೆ ಕಾಯ್ದೆಯನ್ನು ತರಲಾಗಿತ್ತು. ಆದರೆ ರೈಲ್ವೆ ಮಂಡಳಿಯು ಯಾವುದೇ ಶಾಸನಾತ್ಮಕ ಮಂಜೂರಾತಿಯಿಲ್ಲದೆ ಕಾರ್ಯಕಾರಿ ನಿರ್ಧಾರವೊಂದರ ಮೂಲಕ ಕಾರ್ಯವನ್ನು ಮುಂದುವರಿಸಿತ್ತು.
ಭಾರತೀಯ ರೈಲ್ವೆ ಮಂಡಳಿ ಕಾಯ್ದೆ,1905ರಲ್ಲಿಯ ಪ್ರಸ್ತಾವಗಳನ್ನು ರೈಲ್ವೆ ಕಾಯ್ದೆ,1980ರಲ್ಲಿ ಸೇರ್ಪಡೆಗೊಳಿಸುವ ಮೂಲಕ ಕಾನೂನು ಚೌಕಟ್ಟನ್ನು ಸರಳಗೊಳಿಸಲು ಪ್ರಸ್ತುತ ಮಸೂದೆಯು ಉದ್ದೇಶಿಸಿದೆ. ಇದರಿಂದ ಎರಡು ಕಾನೂನುಗಳನ್ನು ಉಲ್ಲೇಖಿಸುವ ಅಗತ್ಯವು ಕಡಿಮೆಯಾಗುತ್ತದೆ ಎಂದು ವೈಷ್ಣವ್ ತಿಳಿಸಿದರು.