ರಾಜಸ್ಥಾನ | ಆಟವಾಡುತ್ತಿದ್ದಾಗ ಬೋರ್ ವೆಲ್ ಗೆ ಬಿದ್ದ ಬಾಲಕ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Update: 2024-12-11 11:26 GMT

PC : ANI

ಜೈಪುರ: ರಾಜಸ್ಥಾನದ ದೌಸಾದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ 150 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದು, ರಕ್ಷಣಾ ಕಾರ್ಯಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕಾಲಿಖಾಡ್ ಗ್ರಾಮದ ಜಮೀನೊಂದರಲ್ಲಿ ಸೋಮವಾರ ಸಂಜೆ ಆಟವಾಡುತ್ತಿದ್ದಾಗ ಐದು ವರ್ಷದ ಬಾಲಕ ಆರ್ಯನ್ ತೆರೆದ ಬೋರ್ ವೆಲ್‌ ಗೆ ಬಿದ್ದಿದ್ದಾನೆ. ಮಾಹಿತಿ ತಿಳಿದು ಸೋಮವಾರ 4 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ರಕ್ಷಣೆ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಬುಧವಾರ ಕೂಡ ಮುಂದುವರಿದಿದೆ.

ಕಾರ್ಯಾಚರಣೆಯ ಮೂರನೇ ದಿನ XCMG 180 ಎಂಬ ಪೈಲಿಂಗ್ ರಿಗ್ ಯಂತ್ರವನ್ನು ಸ್ಥಳಕ್ಕೆ ತರಿಸಿ ಸುರಂಗವನ್ನು ಕೊರೆಯಲಾಗುತ್ತಿದೆ. ಬುಧವಾರದ ವೇಳೆಗೆ 70 ಅಡಿ ಆಳದ ಸುರಂಗವನ್ನು ಕೊರೆಯಲಾಗಿದೆ. ಮಗುವಿನ ರಕ್ಷಣೆಗೆ ಸುರಂಗವನ್ನು ಅಗೆಯಲಾಗುತ್ತಿದ್ದು, ಕಾರ್ಯಾಚರಣೆ ವೇಳೆ ಹಲವು ಸವಾಲುಗಳು ಎದುರಾಗಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಹೇಳಿದ್ದಾರೆ. ಮಗುವಿಗೆ ಪೈಪ್ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದ್ದು, ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ನಾಗರಿಕ ರಕ್ಷಣಾ ತಂಡಗಳು ಕೂಡ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ದೌಸಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News