ಅತ್ಯಾಚಾರ ಪ್ರಕರಣ | ಕಠಿಣ ಕಾನೂನುಗಳು ಮತ್ತು ತ್ವರಿತ ನ್ಯಾಯಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

Update: 2024-08-22 15:23 GMT

ಮಮತಾ ಬ್ಯಾನರ್ಜಿ,  ನರೇಂದ್ರ ಮೋದಿ | PTI 

ಕೋಲ್ಕತಾ : ಅತ್ಯಾಚಾರವನ್ನು ಎಸಗುವವರಿಗೆ ಭೀತಿ ಮೂಡಿಸುವಂತಹ ಶಿಕ್ಷೆಯೊಂದಿಗೆ ಕಠಿಣ ಕೇಂದ್ರೀಯ ಕಾನೂನನ್ನು ತರುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಆಲಾಪನ್ ಬಂಡೋಪಾಧ್ಯಾಯ ಅವರು ಸುದ್ದಿಗೋಷ್ಠಿಯಲ್ಲಿ ಮಮತಾರ ಪತ್ರವನ್ನು ಓದಿದರು.

ಆ.9ರಂದು ಕೋಲ್ಕತಾದ ಸರಕಾರಿ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಮತಾ ಈ ಪತ್ರವನ್ನು ಬರೆದಿದ್ದಾರೆ.

ದೇಶಾದ್ಯಂತ ಅತ್ಯಾಚಾರಗಳು ಸಾಮಾನ್ಯ ಘಟನೆಗಳಾಗಿವೆ ಎಂದು ಹೇಳಿರುವ ಮಮತಾ,ದೇಶದಲ್ಲಿ ಪ್ರತಿ ದಿನ ಸುಮಾರು 90ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ಅತ್ಯಾಚಾರ ಸಂತ್ರಸ್ತೆಯರನ್ನು ಕೊಲ್ಲಲಾಗುತ್ತದೆ ಎಂದು ಬೆಟ್ಟು ಮಾಡಿದ್ದಾರೆ.

‘ಇದು ಭಯಾನಕ ಪ್ರವೃತ್ತಿಯಾಗಿದೆ. ಇದು ಸಮಾಜದ ಹಾಗೂ ದೇಶದ ವಿಶ್ವಾಸವನ್ನು ಮತ್ತು ಪ್ರಜ್ಞೆಯನ್ನು ತಲ್ಲಣಗೊಳಿಸಿದೆ. ಮಹಿಳೆಯರಿಗೆ ಸುರಕ್ಷಿತ ಮತ್ತು ಸುಭದ್ರ ವಾತಾವರಣವನ್ನು ಸೃಷ್ಟಿಸಲು ಇದಕ್ಕೆ ಅಂತ್ಯ ಹಾಡುವುದು ನಮ್ಮ ಬದ್ಧ ಕರ್ತವ್ಯವಾಗಿದೆ. ಇಂತಹ ಗಂಭೀರ ಮತ್ತು ಸೂಕ್ಷ್ಮ ವಿಷಯವನ್ನು ಕಠಿಣ ಕೇಂದ್ರೀಯ ಕಾನೂನಿನ ಮೂಲಕ ಸಮಗ್ರವಾಗಿ ಪರಿಹರಿಸಬೇಕು. ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಇತರರಲ್ಲಿ ಭಯವನ್ನು ಹುಟ್ಟಿಸುವಂತಹ ಶಿಕ್ಷೆಯನ್ನು ವಿಧಿಸಬೇಕು’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಶೀಘ್ರ ನಡೆಸಲು ತ್ವರಿತ ನ್ಯಾಯಾಲಯಗಳ ಸ್ಥಾಪನೆಯನ್ನೂ ಪತ್ರದಲ್ಲಿ ಪ್ರಸ್ತಾವಿಸಿರುವ ಮಮತಾ,ತ್ವರಿತ ನ್ಯಾಯ ದೊರೆಯುವಂತಾಗಲು ವಿಚಾರಣೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News