ಆರೆಸ್ಸೆಸ್-ಬಿಜೆಪಿ ನಡುವೆ ಬಿರುಕಿನ ವದಂತಿ ನಡುವೆ ಇಂದು ಮೋಹನ್ ಭಾಗವತ್‌ - ಆದಿತ್ಯನಾಥ್ ಮಹತ್ವದ ಭೇಟಿ

Update: 2024-06-15 11:00 GMT

 ಮೋಹನ್ ಭಾಗವತ್ , ಆದಿತ್ಯನಾಥ್  | PTI 

ಹೊಸದಿಲ್ಲಿ: ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳ ನಡುವೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಕೇಸರಿ ಪಕ್ಷದ ಪ್ರಮುಖ ಮುಖವಾಗಿರುವ ಆದಿತ್ಯನಾಥ್ ಮತ್ತು ಸಂಘ ಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ಸಂಜೆ ಗೋರಖಪುರದಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ ಎಂದು ndtv.com ಎಂದು ವರದಿ ಮಾಡಿದೆ.

ಬೇರೊಂದು ಕಾರ್ಯಕ್ರಮಕ್ಕಾಗಿ ಭಾಗವತ್ ಮುಖ್ಯಮಂತ್ರಿಗಳ ಸ್ವಕ್ಷೇತ್ರ ಗೋರಖಪುರದಲ್ಲಿದ್ದಾರೆ ಮತ್ತು ಸಂಜೆ ಗೋರಖನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಆದಿತ್ಯನಾಥರನ್ನು ಭೇಟಿಯಾಗಲಿದ್ದಾರೆ ಎಂದಿರುವ ಬಲ್ಲ ಮೂಲಗಳು, ಇದನ್ನು ‘ಸೌಜನ್ಯದ ಭೇಟಿ’ ಎಂದು ಕರೆದಿವೆ.

ಭಾಗವತ್ ಅವರು ಈ ವಾರ ನಾಗ್ಪುರದಲ್ಲಿ ಮಾಡಿದ್ದ ಭಾಷಣದ ಹಿನ್ನೆಲೆಯಲ್ಲಿ ಈ ಭೇಟಿಯು ಮಹತ್ವ ಪಡೆದುಕೊಂಡಿದೆ. ಬಿಜೆಪಿಯನ್ನು ನೇರವಾಗಿ ಹೆಸರಿಸದಿದ್ದರೂ ಪಕ್ಷವು ಚುನಾವಣಾ ಪ್ರಚಾರವನ್ನು ನಡೆಸಿದ್ದ ರೀತಿಯ ಬಗ್ಗೆ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ‘ನಿಜವಾದ ಸೇವಕ ದುರಹಂಕಾರವಿಲ್ಲದೆ ಸೇವೆಯನ್ನು ಮಾಡಬೇಕು’ ಎಂದು ಭಾಗವತ್ ತನ್ನ ಭಾಷಣದಲ್ಲಿ ಹೇಳಿದ್ದು, ಇದು ಬಿಜೆಪಿಯ ಉನ್ನತ ನಾಯಕರನ್ನು, ಸಂಭವನೀಯವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡಿತ್ತು ಎಂದು ಅನೇಕರು ಭಾವಿಸಿದ್ದಾರೆ.

ಭಾಗವತ್ ಪರೋಕ್ಷ ದಾಳಿಯನ್ನು ನಡೆಸಿದ್ದರೆ ಅವರ ಸಹೋದ್ಯೋಗಿ ಇಂದ್ರೇಶ್ ಕುಮಾರ್ ಬಿಜೆಪಿಯ ವಿರುದ್ಧ ನೇರಾನೇರ ದಾಳಿಯನ್ನು ನಡೆಸಿದ್ದಾರೆ. ಶ್ರೀರಾಮನ ಭಕ್ತಿಯನ್ನು ಮೆರೆದಿದ್ದ(ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಉಲ್ಲೇಖಿಸಿ) ಪಕ್ಷದ ವಿರುದ್ಧ ತೀವ್ರ ದಾಳಿ ನಡೆಸಿದ್ದು,ಅದರ ದುರಹಂಕಾರಕ್ಕಾಗಿ ಶ್ರೀರಾಮ ಅದನ್ನು 241 ಲೋಕಸಭಾ ಸ್ಥಾನಗಳಿಗೇ ನಿಲ್ಲಿಸಿದ್ದಾನೆ ಎಂದು ಕುಟುಕಿದ್ದಾರೆ.

ಬಿಜೆಪಿ ಮತ್ತು ತನ್ನ ನಡುವೆ ಬಿರುಕು ಉಂಟಾಗಿದೆ ಎನ್ನುವುದನ್ನು ಆರೆಸ್ಸೆಸ್ ತ್ವರಿತವಾಗಿ ಅಲ್ಲಗಳೆದಿದೆ. ಇದು ತನ್ನ ಮಾತನ್ನೂ ಆಲಿಸಿ ಎಂದು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಆರೆಸ್ಸೆಸ್‌ನ ಸಂದೇಶವಾಗಿತ್ತಷ್ಟೇ. ಭಾಗವತ್ ಅವರ ಈ ಭಾಷಣಕ್ಕೂ ಅವರು 2014 ಮತ್ತು 2019ರಲ್ಲಿ ಬಿಜೆಪಿಯ ಗೆಲುವಿನ ಬಳಿಕ ಮಾಡಿದ್ದ ಭಾಷಣಗಳಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ‘ದುರಹಂಕಾರ’ ಟೀಕೆಯು ಮೋದಿಯವರನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ಮೂಲಗಳು ತೇಪೆ ಹಚ್ಚಿವೆ.

ಇಂದ್ರೇಶ ಕುಮಾರ್ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿರುವ ಆರೆಸ್ಸೆಸ್ ಮೂಲಗಳು ಅದನ್ನು ತಿರುಚಿವೆ ಮತ್ತು ಶ್ರೀರಾಮನು ‘ದುರಹಂಕಾರಿ’ಗಳನ್ನು‌ (ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ) ೨೩೪ಕ್ಕೇ ನಿಲ್ಲಿಸಿದ್ದಾನೆ ಎಂದು ಅವರು ಪ್ರಮುಖವಾಗಿ ಘೋಷಿಸಿದ್ದಾರೆ ಎಂದು ಸಮಜಾಯಿಷಿ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News