ಕಳೆದ ಎರಡು ವರ್ಷಗಳಲ್ಲಿ ಐಐಟಿಗಳು, ಐಐಎಂಗಳಿಗೆ ನೇಮಕಗೊಂಡ ಬೋಧಕರಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ಸಂಖ್ಯೆ ಕೇವಲ ಶೇ.10; ಕೇಂದ್ರ ಸರಕಾರ

Update: 2025-02-12 16:43 IST
ಕಳೆದ ಎರಡು ವರ್ಷಗಳಲ್ಲಿ ಐಐಟಿಗಳು, ಐಐಎಂಗಳಿಗೆ ನೇಮಕಗೊಂಡ ಬೋಧಕರಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ಸಂಖ್ಯೆ ಕೇವಲ ಶೇ.10; ಕೇಂದ್ರ ಸರಕಾರ

Photo credit: PTI

  • whatsapp icon

ಹೊಸದಿಲ್ಲಿ: ಐಐಟಿಗಳು ಮತ್ತು ಐಐಎಂಗಳು ಮೀಸಲು ವರ್ಗಗಳಿಂದ ಅಧ್ಯಾಪಕರನ್ನು ಭರ್ತಿ ಮಾಡಿಕೊಳ್ಳಲು ಅಭಿಯಾನವನ್ನು ಹಮ್ಮಿಕೊಂಡಾಗಿನಿಂದ ಎರಡು ವರ್ಷಗಳಲ್ಲಿ ಈ ಸಂಸ್ಥೆಗಳು ಒಟ್ಟಾಗಿ ನೇಮಕ ಮಾಡಿಕೊಂಡಿರುವ ಬೋಧಕರ ಪೈಕಿ ಕೇವಲ ಶೇ.10ರಷ್ಟು ಅಭ್ಯರ್ಥಿಗಳು ಪರಿಶಿಷ್ಟ ಜಾತಿಗಳು(ಎಸ್‌ಸಿ) ಮತ್ತು ಪರಿಶಿಷ್ಟ ವರ್ಗ(ಎಸ್‌ಟಿ)ಗಳಿಗೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದೆ ಎಂದು thewire.in ವರದಿ ಮಾಡಿದೆ.

ಕೇಂದ್ರ ಸಹಾಯಕ ಶಿಕ್ಷಣ ಸಚಿವ ಸುಕಾಂತ ಮುಜುಮ್ದಾರ್ ಅವರು ಸೋಮವಾರ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದ ಪ್ರಕಾರ,ಐಐಎಂ ಮತ್ತು ಐಐಟಿಗಳು ಸೆ.2022ರಲ್ಲಿ ಎಸ್‌ಸಿಗಳು ಮತ್ತು ಎಸ್‌ಟಿಗಳು ಸೇರಿದಂತೆ ನೇಮಕಾತಿಗಾಗಿ ಅಭಿಯಾನವನ್ನು ಆರಂಭಿಸಿದ ಬಳಿಕ ಡಿ.23,2024ರವರೆಗೆ ಒಟ್ಟು 3,027 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿದ್ದು,ಈ ಪೈಕಿ ಎಸ್‌ಸಿಗಳ ಸಂಖ್ಯೆ ಕೇವಲ 328,ಇವರಲ್ಲಿ 276 ಎಸ್ ಮತ್ತು 52 ಎಸ್‌ಟಿ ಗಳಾಗಿದ್ದಾರೆ.

ಆಗಸ್ಟ್ 2021ರಲ್ಲಿ ಕೇಂದ್ರವು ಎಸ್‌ಸಿಗಳು,ಎಸ್‌ಟಿಗಳು,ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆ(ಸಿಎಚ್‌ಇಐ)ಗಳ ಬೋಧಕರ ಹುದ್ದೆಗಳಲ್ಲಿ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಒದಗಿಸಲು ಕೇಂದ್ರೀಯ ಶಿಕ್ಷಣ ಸಂಸ್ಥೆಗಳ(ಬೋಧಕ ಹುದ್ದೆಗಳಲ್ಲಿ ಮೀಸಲಾತಿ),2019ನ್ನು ಅಧಿಸೂಚಿಸಿತ್ತು. ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ಅಭಿಯಾನವನ್ನು ಆರಂಭಿಸುವಂತೆ ಅದೇ ತಿಂಗಳು ಎಲ್ಲ ಸಿಎಚ್‌ಇಐಗಳಿಗೆ ಸೂಚಿಸಲಾಗಿತ್ತು.

ಸೆಪ್ಟಂಬರ್ 2022ರಿಂದ ಎಲ್ಲ ಐಐಎಂ ಮತ್ತು ಐಐಟಿಗಳು ಎಸ್‌ಸಿ ಮತ್ತು ಎಸ್‌ಟಿಗಳು ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲೂ ಅಭಿಯಾನವನ್ನು ಆರಂಭಿಸಿದ್ದವು, 23.12.2024ರವರೆಗೆ ಎಲ್ಲ ಸಿಎಚ್‌ಇಐಗಳು 15,637 ಬೋಧಕ ಹುದ್ದೆಗಳು ಸೇರಿದಂತೆ ಒಟ್ಟು 26,751 ಹುದ್ದೆಗಳನ್ನು ಭರ್ತಿ ಮಾಡಿವೆ. ಐಐಟಿಗಳು ಮತ್ತು ಐಐಎಂಗಳು ಒಟ್ಟು 7,239 ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಿದ್ದು,ಈ ಪೈಕಿ 276 ಎಸ್‌ಸಿಗಳು ಮತ್ತು 52 ಎಸ್‌ಟಿಗಳು ಸೇರಿದಂತೆ 3027 ಬೋಧಕ ಹುದ್ದೆಗಳಾಗಿವೆ ಎಂದು ಮಜುಮ್ದಾರ್ ಉತ್ತರದಲ್ಲಿ ತಿಳಿಸಿದ್ದಾರೆ.

ಕನಿಷ್ಠ ಎರಡು ಐಐಟಿಗಳು ಮತ್ತು ಮೂರು ಐಐಎಂಗಳಲ್ಲಿ ಶೇ.90ಕ್ಕಿಂತ ಅಧಿಕ ಬೋಧಕ ಹುದ್ದೆಗಳನ್ನು ಸಾಮಾನ್ಯ ವರ್ಗದವರು ಹೊಂದಿದ್ದಾರೆ. ಹೆಚ್ಚುವರಿಯಾಗಿ ಆರು ಐಐಟಿಗಳು ಮತ್ತು ನಾಲ್ಕು ಐಐಎಂಗಳಲ್ಲಿ ಈ ಪ್ರಮಾಣ ಶೇ.80ರಿಂದ ಶೇ.90ರಷ್ಟಿದೆ ಎನ್ನುವುದನ್ನು ಡಿಸೆಂಬರ್‌ನಲ್ಲಿ ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಯಡಿ ಪಡೆಯಲಾದ ಉತ್ತರಗಳು ಬಹಿರಂಗಗೊಳಿಸಿವೆ.

ಕೇಂದ್ರದ ನೀತಿಯಂತೆ ಐಐಟಿಗಳು ಮತ್ತು ಐಐಎಂಗಳು ಸೇರಿದಂತೆ ಬಹುತೇಕ ಎಲ್ಲ ಸಿಎಚ್‌ಇಐಗಳಲ್ಲಿ ಶೇ.27ರಷ್ಟು ಬೋಧಕ ಹುದ್ದೆಗಳು ಒಬಿಸಿಗಳಿಗೆ,ಶೇ.15ರಷ್ಟು ಎಸ್‌ಸಿಗಳಿಗೆ ಮತ್ತು ಶೇ.7.5ರಷ್ಟು ಎಸ್‌ಟಿಗಳಿಗೆ ಮೀಸಲಾಗಿವೆ.

ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯು 172 ಬೋಧಕ ಹುದ್ದೆಗಳಿಗೆ ನೇಮಕಾತಿಗಾಗಿ 2018-19ರಲ್ಲಿ ಜಾಹೀರಾತನ್ನು ಪ್ರಕಟಿಸಿದ್ದು,ಈ ಪೈಕಿ ಕೇವಲ ಶೇ.12ರಷ್ಟು (22) ಹುದ್ದೆಗಳು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಂದ ಭರ್ತಿಯಾಗಿವೆ ಎಂದು ಮಜುಮ್ದಾರ್ ತಿಳಿಸಿದ್ದಾರೆ. 2021-22ರಲ್ಲಿ 270 ಬೋಧಕ ಹುದ್ದೆಗಳಲ್ಲಿ ಕೇವಲ ಶೇ.14ಕ್ಕೆ (40) ಎಸ್‌ಸಿ/ಎಸ್‌ಟಿಗಳು ನೇಮಕಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News