ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಆಸ್ತಿ ಘೋಷಣೆಗಳ ದಿನಾಂಕಗಳನ್ನು ಕೋರಿದ್ದ ಆರ್‌ಟಿಐ ಅರ್ಜಿಗೆ ಸೆಬಿ ನಕಾರ

Update: 2024-12-31 11:14 GMT

 ಮಾಧವಿ ಪುರಿ ಬುಚ್ | PC : PTI  

ಹೊಸದಿಲ್ಲಿ: ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ತಾನು ಮತ್ತು ತನ್ನ ಕುಟುಂಬ ಸದಸ್ಯರು ಹೊಂದಿರುವ ಹಣಕಾಸು ಆಸ್ತಿಗಳು ಮತ್ತು ಸೆಕ್ಯೂರಿಟಿಗಳ ಕುರಿತು ಘೋಷಣೆಗಳನ್ನು ಸಲ್ಲಿಸಿದ್ದ ದಿನಾಂಕಗಳನ್ನು ಕೋರಿ ಮಾಹಿತಿ ಹಕ್ಕು (ಆರ್‌ಟಿಐ)ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ಸೂಕ್ತ ಮಾಹಿತಿಗಳನ್ನು ಒದಗಿಸಲು ಸೆಬಿ ನಿರಾಕರಿಸಿದೆ ಎಂದು deccanherald.com ವರದಿ ಮಾಡಿದೆ.

ಆರ್‌ಟಿಐ ಕಾರ್ಯಕರ್ತ ಕಮೊಡೋರ್ ಲೋಕೇಶ್ ಬಾತ್ರಾ ಅವರು ಈ ದಿನಾಂಕಗಳನ್ನು ಕೋರಿ ಸೆಬಿಗೆ ಅರ್ಜಿ ಸಲ್ಲಿಸಿದ್ದರು, ತಾನು ಘೋಷಣೆಗಳ ವಿವರಗಳನ್ನು ಕೇಳುತ್ತಿಲ್ಲ,‌ ದಿನಾಂಕಗಳನ್ನು ಮಾತ್ರ ಕೋರುತ್ತಿದ್ದೇನೆ ಎಂದು ಬಾತ್ರಾ ತನ್ನ ಅರ್ಜಿಯಲ್ಲಿ ನಿರ್ದಿಷ್ಟವಾಗಿ ತಿಳಿಸಿದ್ದರು.

ಬುಚ್ ಸ್ವಯಂ ದೂರ ಸರಿದಿರುವ ಸಂಭವನೀಯ ಹಿತಾಸಕ್ತಿ ಸಂಘರ್ಷವನ್ನೊಳಗೊಂಡ ಎಲ್ಲ ವಿಷಯಗಳ ವಿವರಗಳನ್ನೂ ಬಾತ್ರಾ ಕೋರಿದ್ದರು. ಹಿತಾಸಕ್ತಿ ಸಂಘರ್ಷದ ಮತ್ತು ವಿವಾದಾತ್ಮಕ ಉದ್ಯಮ ಸಮೂಹ ಅದಾನಿ ಗ್ರೂಪ್ ಜೊತೆಗಿನ ಸಂಬಂಧಗಳ ಆರೋಪಗಳ ಬಳಿಕ ಬುಚ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಬಾತ್ರಾ ಕೋರಿದ್ದ ಮಾಹಿತಿಗಳನ್ನು ಸೆಬಿ ಆರ್‌ಟಿಐ ಕಾಯ್ದೆಯ ಕಲಂ 8(1)ಇ ಅಡಿ ನಿರಾಕರಿಸಿದೆ.

ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಿಸಿಲ್ಲ ಮತ್ತು ಅದು ವ್ಯಕ್ತಿಯ ಖಾಸಗಿತನವನ್ನು ಅನಗತ್ಯವಾಗಿ ಉಲ್ಲಂಘಿಸಬಹುದು ಎಂಬ ಕಾರಣದಿಂದ ಅದನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ, ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯ ಕಲಂ 8(1)(ಜೆ) ಅಡಿ ವಿನಾಯಿತಿ ನೀಡಲಾಗಿದೆ ಎಂದೂ ಸೆಬಿ ತಿಳಿಸಿದೆ.

ಸೆಬಿಯು ತನ್ನಿಂದ ಮಾಹಿತಿಗಳನ್ನು ಕೋರುವಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಶ್ನಿಸಿದೆ. ಸೆಬಿಯಂತಹ ನಿಯಂತ್ರಕ ಸಂಸ್ಥೆಯು ಹೊಂದಿರುವ ಪಾತ್ರದಿಂದಾಗಿ ಅದರ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆಯಲ್ಲಿ ನಾಗರಿಕರು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಸೆಬಿಯ ಪರಿಣಾಮಕಾರಿ ಅಥವಾ ಪರಿಣಾಮಕಾರಿಯಲ್ಲದ ಕಾರ್ಯ ನಿರ್ವಹಣೆ ತೆರಿಗೆ ಪಾವತಿದಾರರ ಹಣದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮವನ್ನು ಹೊಂದಿದೆ ಎಂದು ಬಾತ್ರಾ ಸುದ್ದಿಸಂಸ್ಥೆಗೆ ತಿಳಿಸಿದರು.

ಕಳೆದ ಸೆಪ್ಟಂಬರ್‌ನಲ್ಲಿ ಬಾತ್ರಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಡಿ ಸಂಭವನೀಯ ಹಿತಾಸಕ್ತಿ ಸಂಘರ್ಷದಿಂದಾಗಿ ನಿಯಂತ್ರಕ ಸಂಸ್ಥೆಯ ಕಲಾಪಗಳಿಂದ ಬುಚ್ ಹಿಂದೆ ಸರಿದಿರುವುದರ ವಿವರಗಳನ್ನು ಒದಗಿಸಲು ಸೆಬಿ ನಿರಾಕರಿಸಿತ್ತು. ಈ ವಿವರಗಳು ತಕ್ಷಣಕ್ಕೆ ಲಭ್ಯವಿಲ್ಲ ಎಂದು ಅದು ಹೇಳಿತ್ತು. ಬುಚ್ ಸರಕಾರಕ್ಕೆ ಮತ್ತು ಸೆಬಿಗೆ ಸಲ್ಲಿಸಿದ್ದ ಆಸ್ತಿ ಘೋಷಣೆಗಳ ಪ್ರತಿಗಳನ್ನು ಒದಗಿಸಲೂ ಅದು ನಿರಾಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News