ಸೀತಾರಾಮ ಯೆಚೂರಿ | ಐದು ದಶಕಗಳ ರಾಜಕೀಯ ಹೋರಾಟದ ಬದುಕು
ಹೊಸದಿಲ್ಲಿ : ಅನಾರೋಗ್ಯದಿಂದ ಗುರುವಾರ ನಿಧನರಾದ ದೇಶದ ಪ್ರಮುಖ ಕಮ್ಯೂನಿಸ್ಟ್ ನಾಯಕ ಸೀತಾರಾಮ ಯೆಚೂರಿ ಅವರು ತನ್ನ ಐದು ದಶಕಗಳ ರಾಜಕೀಯ ಜೀವನವನ್ನು ಶ್ರಮಿಕ ವರ್ಗದ ಹಾಗೂ ಜಾತ್ಯತೀತ ಭಾರತದ ಚಿಂತನೆಯ ಸಾಕಾರಕ್ಕಾಗಿ ಮುಡಿಪಾಗಿಟ್ಟಿದ್ದರು.
ಆಪ್ತರ ಬಳಗದಲ್ಲಿ ಎಸ್‌ಆರ್‌ವೈ ಎಂದೇ ಆತ್ಮೀಯವಾಗಿ ಕರೆಸಿಕೊಳ್ಳುತ್ತಿದ್ದ ಸೀತಾರಾಮ ಅವರು ಯೆಚೂರಿ ಅವರು 1952ರ ಆಗಸ್ಟ್ 12ರಂದು ಮದ್ರಾಸ್‌ನಲ್ಲಿ ಜನಿಸಿದ್ದರು. ಅವರ ತಂದೆ ಎಂಜಿನಿಯರ್ ಆಗಿದ್ದರೆ, ತಾಯಿ ಸರಕಾರಿ ಅಧಿಕಾರಿ. ಯೆಚೂರಿ ತವರು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹಿಂಸಾತ್ಮಕ ಚಳವಳಿ ಭುಗಿಲೆದ್ದ ಬಳಿಕ ಅವರು ಪದವಿ ಶಿಕ್ಷಣಕ್ಕಾಗಿ ದಿಲ್ಲಿಯಲ್ಲಿ ನೆಲೆಸಬೇಕಾಯಿತು.
ಪ್ರತಿಭಾವಂತ ವಿದ್ಯಾರ್ಥಿಯಾದ ಯೆಚೂರಿ ಅವರು ದಿಲ್ಲಿ ವಿವಿಯ ಸೈಂಟ್ ಸ್ಚೀಫನ್ಸ್ ಕಾಲೇಜ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ಕಮ್ಯೂನಿಸ್ಟ್ ಹೋರಾಟಗಾರ ಪ್ರಕಾಶ್ ಕಾರಟ್ ಅವರ ಪರಿಚಯವಾಯಿತು. 1975ರಲ್ಲಿ ಜವಾಹರಲಾಲ್ ನೆಹರೂ ವಿವಿ(ಜೆಎನ್‌ಯು)ಯಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದರು.
ಎಳೆಯ ವಯಸ್ಸಿನಲ್ಲೇ ಯೆಚೂರಿ ಅವರು ಕಮ್ಯೂನಿಸ್ಟ್ ಚಳವಳಿಯಿಂದ ಪ್ರಭಾವಿತರಾಗಿದ್ದರು. ಜೆಎನ್‌ಯು ವಿದ್ಯಾರ್ಥಿಯಾಗಿದ್ದಾಗ ಅವರು ರಾಜಕೀಯದ ವರಸೆಗಳನ್ನು ಕಲಿತರು. 1974ರಲ್ಲಿ ಅವರು ಸಿಪಿಎಂನ ವಿದ್ಯಾರ್ಥಿ ಘಟಕವಾದ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ)ಕ್ಕೆ ಸೇರ್ಪಡೆಗೊಂಡರು. ಆದರೆ ಇಂದಿರಾಗಾಂಧಿ ಸರಕಾರವು 1975ರಲ್ಲಿ ತುರ್ತುಪರಿಸ್ಥಿತಿ ಹೇರಿದ್ದರಿಂದ ಅವರು ಭೂಗತರಾಗಬೇಕಾಯಿತು. ಎಚ್‌ಡಿ ಅಧ್ಯಯನವನ್ನು ಸ್ಥಗಿತಗೊಳಿಸಬೇಕಾಯಿತು. ಆದರೆ ಸರಕಾರ ವಿರೋಧಿ ಬಂಡಾಯವನ್ನು ನಡೆಸಲು ಸಂಚು ಹೂಡಿದ ಆರೋಪದಲ್ಲಿ ಅವರು ಬಂಧಿತರಾದರು. ತುರ್ತುಪರಿಸ್ಥಿತಿ ರದ್ದಾದ ಬಳಿಕ ಯಚೂರಿ ಅವರು 1977 ಹಾಗೂ 1978ರ ನಡುವೆ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾದರು. ಬಳಿಕ ಅವರು ಕ್ಷಿಪ್ರವಾಗಿ ಸಿಪಿಎಂ ಪಕ್ಷದಲ್ಲಿ ಮೇಲೇರುತ್ತಲೇ ಹೋದರು. 32ನೇ ವಯಸ್ಸಿನಲ್ಲಿ ಪಕ್ಷದ ಕೇಂದ್ರೀಯ ಸಮಿತಿಯ ಸದಸ್ಯರಾದರು ಹಾಗೂ 40ನೇ ವಯಸ್ಸಿನಲ್ಲಿ ಸಿಪಿಎಂನ ಅತ್ಯುನ್ನತ ನೀತಿ ನಿರೂಪಕ ಘಟಕವಾದ ಪಾಲಿಟ್‌ಬ್ಯೂರೋಗೆ ಸೇರ್ಪಡೆಗೊಂಡರು.
34 ವರ್ಷಗಳ ನಿರಂತರ ಆಳ್ವಿಕೆಯ ಬಳಿಕ 2015ರಲ್ಲಿ ಪಶ್ಚಿಮಬಂಗಾಳದಲ್ಲಿ ಸಿಪಿಎಂ ಅಧಿಕಾರ ಕಳೆದುಕೊಂಡ ಬಳಿಕ ಯೆಚೂರಿ ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2018ರಲ್ಲಿ ತ್ರಿಪುರಾದಲ್ಲಿಯೂ ಸಿಪಿಎಂ 25 ವರ್ಷಗಳ ಬಳಿಕ ಅಧಿಕಾರವನ್ನು ಕಳೆದುಕೊಂಡಿತು.
ವಿದ್ಯಾರ್ಥಿ ಜೀವನದಲ್ಲಿಯೇ ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯರಾಗಿದ್ದ ಯೆಚೂರಿ ಅವರು 1984ರಲ್ಲಿ 32ನೇ ವಯಸ್ಸಿನವರಿದ್ದಾಗ ಸಿಪಿಎಂ ಕೇಂದ್ರೀಯ ಸಮಿತಿ ಸಭೆಗೆ ವಿಶೇಷ ಆಹ್ವಾನಿತರಾಗಿದ್ದರು. ಪಕ್ಷದಲ್ಲಿ ಮಹತ್ತರವಾದ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಯಚೂರಿಯವರಿಗಿದ್ದ ಸಾಮರ್ಥ್ಯದ ಬಗ್ಗೆ ಆಗಿನ ಸಿಪಿಎಂ ಪ್ರಧಾನ ಕಾರ್ಯದರ್ಶಿ ಇ.ಎಂ.ಎಸ್. ನಂಬೂದಿರಿಪ್ಪಾಡ್ ಅವರಿಗೆ ದೃಢವಿಶ್ವಾಸವಿತ್ತು. ಎಂಟು ವರ್ಷಗಳ ಬಳಿಕ ಯಚೂರಿ ಅವರು ಸಿಪಿಎಂನ ಅತ್ಯಂತ ಕಿರಿಯ ವಯಸ್ಸಿನ ಪಾಲಿಟ್‌ಬ್ಯೂರೋ ಸದಸ್ಯರಾಗಿ ಸೇರ್ಪಡೆಗೊಂಡರು.
ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗುವ ಮುನ್ನ ಯೆಚೂರಿ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಫ್ಯಾಶಿಸ್ಟ್ ವಿರೋಧಿ ಸಾಂಸದಿಕನಾದ ಅವರು 1996ರಲ್ಲಿ ಸಂಯುಕ್ತರಂಗ ಸರಕಾರಕ್ಕೆ ಹಾಗೂ 2004 ಹಾಗೂ 2009ರಲ್ಲಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಮೈತ್ರಿ ಸರಕಾರಗಳಿಗೆ ಅಧಿಕಾರಕ್ಕೇರಿದ ಸಂದರ್ಭ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2005ರಿಂದ 2017ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಯಚೂರಿ ಅವರು ಇನ್ನೂ ಎರಡು ಅವಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. ಅಪ್ರತಿಮ ವಾಕ್ಪಟುತ್ವವನ್ನು ಹೊಂದಿದ್ದ ಅವರು, ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಪ್ರಬಲವಾದ ವಾದವನ್ನು ಮಂಡಿಸುವ ಮೂಲಕ ಬಿಜೆಪಿ ಸರಕಾರವನ್ನು ತಬ್ಬಿಬ್ಬುಗೊಳಿಸುತ್ತಿದ್ದರು.
ಆದರೆ ದೇಶದಲ್ಲಿ ಕ್ಷೀಣಿಸುತ್ತಿರುವ ಎಡಪಕ್ಷಗಳ ಪ್ರಭಾವವನ್ನು ಬೆಳೆಸುವಲ್ಲಿ ಅವರು ವಿಫಲರಾದರು. ಪ್ರಸಕ್ತ ಎಡರಂಗವು ಕೇರಳದಲ್ಲಿ ಮಾತ್ರವೇ ಅಧಿಕಾರದಲ್ಲಿದೆ. ಲೋಕಸಭೆಯಲ್ಲಿ ಹಾಗೂ ರಾಜ್ಯದಲ್ಲಿ ಸಿಪಿಎಂನ ತಲಾ ನಾಲ್ವರು ಸಂಸದರಿದ್ದಾರೆ.
ಎಡಪಂಥೀಯ ವಿಚಾರಧಾರೆಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ಯೆಚೂರಿ ಬರೆದಿದ್ದಾರೆ. ‘ಲೆಫ್ಟ್‌ಹ್ಯಾಂಡ್ ಡ್ರೈವ್’, ‘ವಾಟ್ ಇಸ್ ದಿಸ್ ಹಿಂದೂ ರಾಷ್ಟ್ರ’, ‘ಸೋಶಿಯಲಿಸಂ ಇನ್ 21 ಸೆಂಚುರಿ’, ‘ಕಮ್ಯುನಾಲಿಸಂ ವರ್ಸಸ್ ಸೆಕ್ಯುಲರಿಸಂ’ ಇತ್ಯಾದಿ ಪುಸ್ತಕಗಳನ್ನು ಅವರು ಬರೆದಿದ್ದಾರೆ.
ಯೆಚೂರಿ ಅವರು ಮೊದಲ ಪತ್ನಿ ಇಂದ್ರಾಣಿ ಮಝುಂದಾರ್. ಆನಂತರ ಅವರು ಪತ್ರಕರ್ತೆ ಸೀಮಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ.
► ಯೆಚೂರಿ ನೇತೃತ್ವದ ಪ್ರತಿಭಟನೆಗೆ ಮಣಿದು ಜೆಎನ್‌ಯು ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದ ಇಂದಿರಾ
1977ರ ಆಕ್ಟೋಬರ್‌ನಲ್ಲಿ ಆಗ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಸೀತಾರಾಮ ಯೆಚೂರಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು, ಇಂದಿರಾಗಾಂಧಿ ಅವರ ನಿವಾಸಕ್ಕೆ ತೆರಳಿ ಸಂಸ್ಥೆಯ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿದರು.
ತುರ್ತುಪರಿಸ್ಥಿತಿ ಹೇರಿಕೆಯ ಆನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕವೂ ಇಂದಿರಾಗಾಧಿ ಕುಲಪತಿ ಹುದ್ದೆಯನ್ನು ತೊರೆಯಲು ನಿರಾಕರಿಸಿದ್ದರು.
ಆದರೆ ಕೊನೆಗೂ ಪ್ರತಿಭಟನಕಾರರ ಬೇಡಿಕೆಗೆ ಮಣಿದ ಇಂದಿರಾಗಾಂಧಿ ಕೆಲವು ದಿನಗಳ ಬಳಿಕ ಪದತ್ಯಾಗ ಮಾಡಿದರು. ಈ ಘಟನೆಯು ಯೆಚೂರಿ ಅವರ ರಾಜಕೀಯ ಬದುಕು ಏರುಗತಿಯನ್ನು ಕಾಣಲು ಕಾರಣವಾಯಿತು.