ತಾಯಿಯ ಸಾಕ್ಷಿ ಆಧರಿಸಿ ಮಗನಿಗೆ ಜೀವಾವಧಿ ಶಿಕ್ಷೆ!

Update: 2023-09-04 02:23 GMT

ಅಗರ್ತಲ:  ವಿಧವೆಯೊಬ್ಬರ ಕೊಲೆಗೆ ಸಂಬಂಧಿಸಿದಂತೆ ಆರೋಪಿಯ ತಾಯಿ ನೀಡಿದ ಸಾಕ್ಷ್ಯವನ್ನು ಆಧರಿಸಿ ಮಗ ಹಾಗೂ ಆತನ ಸ್ನೆಹಿತನಿಗೆ ಜೀವಾವಧಿ ಶಿಕ್ಷೆಯಾದ ಅಪರೂಪದ ಘಟನೆ ತ್ರಿಪುರಾದ ಸೆಪಹಿಜಾಲ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಬಿಶಾಲಗಡ ನಗರಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಾ ದಾಸ್ ಎಂಬ 55 ವರ್ಷ ವಯಸ್ಸಿನ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಸುಮನ್ ದಾಸ್ (24) ಹಾಗೂ  ಆತನ ಸ್ನೇಹಿತ ಚಂದನ್ ದಾಸ್ (26) ಎಂಬ ಇಬ್ಬರಿಗೆ ಶಿಕ್ಷೆ ನೀಡಿ ಸೆಪಹಿಜಾಲ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ಸೆಪಹಿಜಾಲದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕೃಷ್ಣಾದಾಸ್ ಅವರ ಮೇಲೆ 2020ರ ಏಪ್ರಿಲ್ ನಲ್ಲಿಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಹತ್ಯೆಗೆ ಮುನ್ನ ಇಬ್ಬರೂ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

 "ಪಾಳು ಬಾವಿಗೆ ಎಸೆದಿದ್ದ ಆಕೆಯ ಶವವನ್ನು ಹೊರತೆಗೆದ ಬಳಿಕ ಮೃತಳ ಸೊಸೆ ಸುಮಿತ್ರಾ ದಾಸ್ ಎಫ್ಐಆರ್ ದಾಖಲಿಸಿದ್ದರು" ಎಂದು ಪೊಲೀಸರು ವಿವರ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪೊಲೀಸರು ಸುಮನ್ ದಾಸ್  ನ ತಾಯಿ ಸೇರಿದಂತೆ 25 ಮಂದಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ತಾಯಿ ತನ್ನ ಮಗನ ವಿರುದ್ಧವೇ ಸಾಕ್ಷ್ಯ ಹೇಳಿದ್ದರು.

"ಪೊಲೀಸರು ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ವಿಚಾರಣ ವೇಳೆ ಪ್ರಸ್ತುತಪಡಿಸಿದಾಗ, ಆಪಾದಿತ ಮಗ ಹಾಗೂ ಆತನ ಸ್ನೇಹಿತನಿಗೆ ಶಿಕ್ಷೆಯಾಗಲೇಬೇಕು ಎಂಬ ನಿರ್ಧಾರದಿಂದ ಸುಮನ್ ನ ತಾಯಿ ನಮಿತಾ ದಾಸ್ ಮಗನ ವಿರುದ್ಧವೇ ಸಾಕ್ಷಿ ಹೇಳಿದ್ದರು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗೌತಮ್ ಗಿರಿ ಹೇಳಿದ್ದಾರೆ. ವಿಚಾರಣೆ ವೇಳೆ ಮಗನಿಗೆ ಗಲ್ಲು ಶಿಕ್ಷೆ ವಿಧಿಸುವಂತೆಯೂ ತಾಯಿ ಆಗ್ರಹಿಸಿದ್ದರು.

ಆದರೆ ಆರೋಪಿಗಳ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸೂಕ್ತ ಪುರಾವೆಗಳು ಸಿಕ್ಕಿಲ್ಲ. ಮಹಿಳೆಯ ಕೊಳೆತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅತ್ಯಾಚಾರವನ್ನು ದೃಢಪಡಿಸಲು ವೈದ್ಯಕೀಯ ಪರೀಕ್ಷೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ಗಿರಿ ವಿವರಿಸಿದ್ದಾರೆ. ಇಬ್ಬರೂ ಆರೋಪಿಗಳಿಗೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News