"ಕೇಂದ್ರ ಬಜೆಟ್ ದೇಶದ ವಿರುದ್ಧದ ಪ್ರತೀಕಾರ": ಕೇಂದ್ರ ಸರಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ
ಚೆನ್ನೈ: 2024-25ನೇ ಸಾಲಿನ ಕೇಂದ್ರ ಬಜೆಟ್ ದೇಶದ ವಿರುದ್ಧ ಬಿಜೆಪಿ ತೆಗೆದುಕೊಂಡಿರುವ ಪ್ರತೀಕಾರವಾಗಿದ್ದು, ಅದು ತಪ್ಪಿನ ಮೇಲೆ ತಪ್ಪು ಮಾಡುತ್ತಲೇ ಇರುವುದರಿಂದ ಭವಿಷ್ಯದಲ್ಲಿ ಇನ್ನೂ ಹೆಚ್ಚು ಚುನಾವಣಾ ಪರಾಭವಗಳನ್ನು ಎದುರಿಸಲಿದೆ ಎಂದು ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.
ಇಂದು (ಶನಿವಾರ) ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿರುವ ನೀತಿ ಆಯೋಗದ ಸಭೆಯನ್ನು ತಾನೇಕೆ ಬಹಿಷ್ಕರಿಸಿದ್ದೇನೆ ಎಂಬುದನ್ನು ವಿವರಿಸಿದ ಸ್ಟಾಲಿನ್, ಬಜೆಟ್ ನಲ್ಲಿ ತಮಿಳುನಾಡಿನ ವಿರುದ್ಧ ತೋರಿದ ತಾರತಮ್ಯ ಧೋರಣೆಗಾಗಿ ಜನತಾ ನ್ಯಾಯಾಲಯದಲ್ಲಿ ನ್ಯಾಯ ಕೋರಲು ನಾನು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದು ಅನಿವಾರ್ಯವಾಯಿತು ಎಂದು ತಿಳಿಸಿದ್ದಾರೆ.
ಸುಮಾರು ರೂ. 37,000 ಕೋಟಿ ನೆರೆ ಪರಿಹಾರ ಹಾಗೂ ಚೆನ್ನೈ ಮೆಟ್ರೊ ರೈಲಿನ ಎರಡನೆ ಹಂತಕ್ಕೆ ನೆರವು ನೀಡಬೇಕು ಎಂಬ ರಾಜ್ಯ ಸರಕಾರದ ಮನವಿಯನ್ನು ಬಜೆಟ್ ನಲ್ಲಿ ಪರಿಗಣಿಸಲಾಗಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯು ರಾಜಕೀಯ ಪ್ರೇರಿತವಾಗಿ ಸರಕಾರವನ್ನು ನಡೆಸುತ್ತಿದೆ ಎಂದೂ ಅವರು ದೂರಿದ್ದಾರೆ.
“ಇದು ಕೇವಲ ತಮಿಳುನಾಡಿನ ವಿರುದ್ಧ ಪ್ರತೀಕಾರ ತೆಗೆದುಕೊಂಡಿರುವ ಬಜೆಟ್ ಅಲ್ಲ, ಬದಲಿಗೆ ಇಡೀ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಂಡಿರುವ ಬಜೆಟ್ ಆಗಿದೆ! ಅಧಿಕಾರದಲ್ಲಿ ಉಳಿಯಲು ಇದು ಬಿಜೆಪಿಯ ಸರಕಾರ ರಕ್ಷಿಸಿಕೊಳ್ಳುವ ಬಜೆಟ್ ಆಗಿದೆ. ತಮಿಳುನಾಡಿನ ಜನರ ಧ್ವನಿಯಾಗಿ, ವಾಸ್ತವವಾಗಿ ಇಡೀ ದೇಶದ ಧ್ವನಿಯಾಗಿ ನಾನು ನಿಮಗೆ (ಬಿಜೆಪಿ) ಒಂದು ಮಾತು ಹೇಳಲು ಬಯಸುತ್ತೇನೆ – ನೀವು ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀರಿ. ನೀವು ಇನ್ನೂ ಹೆಚ್ಚೆಚ್ಚು ಪರಾಭವಗಳನ್ನು ಅನುಭವಿಸಲಿದ್ದೀರಿ. ಭಾರತದ ಸಂಸತ್ತಿನ ಉಭಯ ಸದನಗಳು ಹೇಗೆ ನಿಮ್ಮ ವಿರುದ್ಧ ಮುಗಿ ಬಿದ್ದಿವೆ, ಅದೇ ರೀತಿಯಲ್ಲಿ ಜನ ಕೂಡಾ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಇದಕ್ಕೆ ಉತ್ತರಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.