ನ್ಯಾಯಾಂಗ ವ್ಯವಸ್ಥೆಯ ಮೂಲಸೌಕರ್ಯ ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿ ಉತ್ತಮ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಓಕಾ

Update: 2025-02-15 21:39 IST
Justice Abhay Shreeniwas Oka

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಓಕಾ | PC : The Hindu

  • whatsapp icon

ಮುಂಬೈ: ಮಹಾರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಆದರೆ ನೆರೆರಾಜ್ಯವಾದ ಕರ್ನಾಟಕದಲ್ಲಿ ಇದಕ್ಕಿಂತ ವಿಭಿನ್ನವಾದ ಪರಿಸ್ಥಿತಿಯಿದೆಯೆಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಭಯ್ ಓಕಾ ಶನಿವಾರ ಹೇಳಿದ್ದಾರೆ.

ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಓಕಾ ಅವರು ಆನಂತರ ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಬಳಿಕ ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ಪಡೆದಿದ್ದರು.

ಮುಂಬೈಯಲ್ಲಿ ಶನಿವಾರ ಅವರು ‘ನಮ್ಮ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆ ಯಾವುದರಿಂದ ಬಳಲುತ್ತಿದೆ- ಕೆಲವೊಂದು ಚಿಂತನೆಗಳು’ ವಿಷಯವಾಗಿ ಅಶೋಕ್ ದೇಸಾಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮಹಾರಾಷ್ಟ್ರ ಸರಕಾರದಿಂದ ನ್ಯಾಯಾಂಗ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಪಡೆಯಲು ನಾವು ಹೋರಾಡಿದ್ದೇವೆ. ನಾವು ಮೂಲಭೂತ ಸೌಕರ್ಯಗಳ ಕೊರತೆಯನ್ನು ಹೊಂದಿದ್ದೇವೆ. ಮಹಾರಾಷ್ಟ್ರ ಸರಕಾರದಿಂದ ಮೂಲ ಸೌಕರ್ಯಗಳನ್ನು ಪಡೆಯುವುದು ತುಂಬಾ ಕಷ್ಚವೆಂದು ಅವರು ಅಭಿಪ್ರಾಯಿಸಿದರು.

ಪುಣೆಯಲ್ಲಿರುವ ಸಿವಿಲ್ ನ್ಯಾಯಾಲಯ ಸಂಕೀರ್ಣದಲ್ಲಿ ನ್ಯಾಯಾಧೀಶರಿಗೆ ಪ್ರತ್ಯೇಕ ಕೊಠಡಿಗಳೇ ಇಲ್ಲವೆಂದು ಅವರು ಗಮನಸೆಳೆದರು. ಆದರೆ ಕರ್ನಾಟಕದ ಪರಿಸ್ಥಿತಿ ಇಲ್ಲಿಗಿಂತ ಭಿನ್ನವಾಗಿದೆ. ನ್ಯಾಯಾಂಗವು ಕೇಳುವುದೆಲ್ಲವನ್ನೂ ಸರಕಾರವು ನೀಡುತ್ತಿದೆ ಎಂದು ಹೇಳಿದ ಓಕಾ ಅವರು ಕಲಬುರ್ಗಿಯಲ್ಲಿರುವ ಕರ್ನಾಟಕ ಹೈಕೋರ್ಟ್ ಪೀಠದ ಕಟ್ಟಡವು ಪಂಚತಾರಾ ಹೊಟೇಲ್‌ನಂತೆ ಕಂಗೊಳಿಸುತ್ತದೆ ಎಂದು ಹೇಳಿದರು.

ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ಹಲವಾರು ಸಮಸ್ಯೆಗಳು ಕಾಡುತ್ತಿವೆ. ಶ್ರೀಸಾಮಾನ್ಯನ ನಿರೀಕ್ಷೆಗಳನ್ನು ಈ ವ್ಯವಸ್ಥೆಯು ಈಡೇರಿಸಿಲ್ಲವೆಂದು ಅವರು ವಿಷಾದ ವ್ಯಕ್ತಪಡಿಸಿದರು.

ಮರಣದಂಡನೆಯ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ತಾನು ಆ ಪರಿಕಲ್ಪನೆಗೆ ವಿರುದ್ಧವಾಗಿದ್ದೇನೆ .ಆದರೆ ಈ ಬಗ್ಗೆ ಎಲ್ಲ ಹಿತಧಾರಕರೊಂದಿಗೆ ಚರ್ಚೆಯಾಗಬೇಕೆಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News