ಚುನಾವಣಾ ಬಾಂಡ್ ಉದ್ದೇಶ ಒಳ್ಳೆಯದಾಗಿತ್ತು; ನಿಧಿ ಇಲ್ಲದೆ ಯಾವ ಪಕ್ಷವೂ ಉಳಿಯಲು ಸಾಧ್ಯವಿಲ್ಲ: ನಿತಿನ್ ಗಡ್ಕರಿ

Update: 2024-03-23 06:45 GMT

 ನಿತಿನ್ ಗಡ್ಕರಿ | Photo: PTI 

ಅಹಮದಾಬಾದ್: ನಿಧಿ ಇಲ್ಲದೆ ರಾಜಕೀಯ ಪಕ್ಷವೊಂದನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸದ್ಯ ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್ ಯೋಜನೆಯನ್ನು ಉತ್ತಮ ಉದ್ದೇಶದಿಂದ ಜಾರಿಗೆ ತರಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ಒಂದು ವೇಳೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಏನಾದರೂ ಮತ್ತಷ್ಟು ನಿರ್ದೇಶನ ನೀಡಿದರೆ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟುಗೂಡಿ ಈ ಕುರಿತು ಚಿಂತನೆ ನಡೆಸಬೇಕು ಎಂದು ಬಿಜೆಪಿಯ ಹಿರಿಯ ನಾಯಕರೂ ಆದ ಗಡ್ಕರಿ ಸಲಹೆ ನೀಡಿದ್ದಾರೆ.

ಶುಕ್ರವಾರ ಗಾಂಧಿನಗರದಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.

“ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಚುನಾವಣಾ ಬಾಂಡ್ ಕುರಿತ ಚರ್ಚೆಯಲ್ಲಿ ನಾನೂ ಭಾಗಿಯಾಗಿದ್ದೆ. ಸಂಪನ್ಮೂಲವಿಲ್ಲದೆ ಯಾವ ರಾಜಕೀಯ ಪಕ್ಷವೂ ಬದುಕುಳಿಯಲು ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಸರಕಾರಗಳೇ ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುತ್ತವೆ. ಅಂತಹ ವ್ಯವಸ್ಥೆ ಭಾರತದಲ್ಲಿಲ್ಲ. ಹೀಗಾಗಿ, ನಾವು ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುವ ವ್ಯವಸ್ಥೆಯನ್ನು ಆಯ್ದುಕೊಂಡಿದ್ದೇವೆ” ಎಂದು ಅವರು ಚುನಾವಣಾ ಬಾಂಡ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣಾ ಬಾಂಡ್ ಗಳನ್ನು ಪರಿಚಯಿಸುವುದರ ಹಿಂದಿನ ಮುಖ್ಯ ಉದ್ದೇಶ ರಾಜಕೀಯ ಪಕ್ಷಗಳು ನೇರವಾಗಿ ದೇಣಿಗೆ ಪಡೆಯಲಿ ಎಂಬುದಾಗಿತ್ತು. ಆದರೆ, ಸರಕಾರಗಳು ಬದಲಾದಾಗ ದೇಣಿಗೆದಾರರಿಗೆ ತೊಂದರೆ ಆಗದಿರಲೆಂದು ಅವರ ಹೆಸರನ್ನು ಬಹಿರಂಗಗೊಳಿಸದಿರಲು ನಿರ್ಧರಿಸಲಾಗಿತ್ತು ಎಂಬುದರತ್ತ ಅವರು ಬೊಟ್ಟು ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News