ನ. 2ರಂದು ಕೇಜ್ರಿವಾಲ್ ಅವರನ್ನು ಈಡಿ ಬಂಧಿಸಲಿದೆ ಎಂದ ಆಪ್ ನಾಯಕಿ
ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದ ಸಂಬಂಧ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿರುವ ಬೆನ್ನಲ್ಲೇ, ನರೇಂದ್ರ ಮೋದಿಯವರು ಅರವಿಂದ್ ಕೇಜ್ರಿವಾಲ್ ಬಗ್ಗೆ ಭೀತಗೊಂಡಿರುವುದರಿಂದ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿದ್ದಂತೆಯೆ ಅವರನ್ನು ಬಂಧಿಸಲಾಗುತ್ತದೆ ಎಂದು ಮಂಗಳವಾರ ಆಪ್ ನಾಯಕಿ ಹಾಗೂ ಸಚಿವೆ ಅತಿಶಿ ಆರೋಪಿಸಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಬಕಾರಿ ನೀತಿ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ಕುರಿತು ಪ್ರಶ್ನಿಸಲು ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ದಿಲ್ಲಿಯಲ್ಲಿನ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯ ಎದುರು ಅರವಿಂದ್ ಕೇಜ್ರಿವಾಲ್ ಹಾಜರಾಗುತ್ತಿದ್ದಂತೆಯೆ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯವು ದಾಖಲಿಸಿಕೊಳ್ಳಲಿದೆ.
“ನವೆಂಬರ್ 2ರಂದು ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿದ್ದಂತೆಯೆ ಅವರನ್ನು ಬಂಧಿಸಲಾಗುತ್ತದೆ ಮತ್ತು ಅವರನ್ನು ಜೈಲಿಗೆ ಕಳಿಸಲಾಗುತ್ತದೆ ಎಂಬ ಮಾಹಿತಿ ನಮಗೆ ದೊರೆಯುತ್ತಿದೆ” ಎಂದು ಅತಿಶಿ ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಪ್ರಧಾನಿ ಮೋದಿಯು ಆಪ್ ಅನ್ನು ಮುಗಿಸಲು ಬಯಸಿದ್ದಾರೆ ಎಂದು ದೂರಿರುವ ಅತಿಶಿ, “ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗುತ್ತಿಲ್ಲ; ಬದಲಿಗೆ, ಪ್ರಧಾನಿ ಮೋದಿಗೆ ಅವರನ್ನು ಕಂಡರೆ ಭಯ. ಆಪ್ ಅನ್ನು ಚುನಾವಣೆಗಳಲ್ಲಿ ಪರಾಭವಗೊಳಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ತಿಳಿದಿದೆ. ಇದೀಗ ಆಪ್ ಅನ್ನು ಮುಗಿಸಲು, ಅದರ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಆಪ್ ಪಕ್ಷದ ಎಲ್ಲ ನಾಯಕರನ್ನೂ ಜೈಲಿಗೆ ಹಾಕುವುದರ ಅರ್ಥ ಬಿಜೆಪಿಗೆ ಆಪ್ ಅನ್ನು ಮುಗಿಸಬೇಕಿದೆ ಎಂಬುದು” ಎಂದು ಆರೋಪಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಇದಕ್ಕೂ ಮುನ್ನ, ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ರಿಲ್ ತಿಂಗಳಿನಲ್ಲಿ ಸಿಬಿಐ ಅವರನ್ನು ಪ್ರಶ‍್ನಿಸಿತ್ತು.