ಮೂರನೇ ಟೆಸ್ಟ್: ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಪಾಕಿಸ್ತಾನ 313 ರನ್ ಗೆ ಆಲೌಟ್
ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆರಂಭವಾದ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಪಾಕಿಸ್ತಾನ ಒಟ್ಟು 313 ರನ್ ಗಳಿಸಿ ಸರ್ವಪತನಗೊಂಡಿತು.
ಕಳಪೆ ಆರಂಭ ಪಡೆದಿದ್ದ ಪಾಕಿಸ್ತಾನವು ಮುಹಮ್ಮದ್ ರಿಝ್ವಾನ್, ಅಘಾ ಸಲ್ಮಾನ್ ಹಾಗೂ ಆಮಿರ್ ಜಮಾಲ್ ಅರ್ಧಶತಕದ ಬಲದಿಂದ ಮರು ಹೋರಾಟ ನೀಡಿ ಆಸ್ಟ್ರೇಲಿಯದ ಬೌಲರ್ ಗಳಿಗೆ ಸಡ್ಡು ಹೊಡೆಯಿತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಕೇವಲ 96 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಂಡಿತು. ರಿಝ್ವಾನ್(88 ರನ್, 103 ಎಸೆತ, 10 ಬೌಂಡರಿ, 2 ಸಿಕ್ಸರ್) ಹಾಗೂ ಸಲ್ಮಾನ್(53 ರನ್, 67 ಎಸೆತ, 8 ಬೌಂಡರಿ)ನೇತೃತ್ವದಲ್ಲಿ ಪಾಕಿಸ್ತಾನ ಸ್ಫೂರ್ತಿಯುತ ಪ್ರತಿ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು.
97 ಎಸೆತಗಳಲ್ಲಿ 82 ರನ್ ಗಳಿಸಿದ ಜಮಾಲ್ ಪಾಕಿಸ್ತಾನದ ಇನಿಂಗ್ಸ್ ಗೆ ಮತ್ತಷ್ಟು ಶಕ್ತಿ ತುಂಬಿದರು. ಬಾಲಂಗೋಚಿಗಳು ಉಪಯುಕ್ತ ರನ್ ಗಳಿಸಿ ಪಾಕ್ ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು.
ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ತನ್ನ ಶ್ರೇಷ್ಠ ಫಾರ್ಮ್ ಅನ್ನು ಮುಂದುವರಿಸಿದ್ದು ಸತತ ಮೂರನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲು(5-61)ಕಬಳಿಸಿದರು. ಕಮಿನ್ಸ್ ವೀರೋಚಿತ ಪ್ರದರ್ಶನದ ಹೊರತಾಗಿಯೂ ಪಾಕಿಸ್ತಾನದ ಕೆಳ ಕ್ರಮಾಂಕದ ಆಟಗಾರರು ಪ್ರತಿರೋಧ ಒಡ್ಡಿ ಆಸ್ಟ್ರೇಲಿಯದ ಬೌಲರ್ ಗಳಿಗೆ ನಿರಾಸೆಗೊಳಿಸಿದರು.
ನಾಯಕ ಶಾನ್ ಮಸೂದ್(35 ರನ್) ಹಾಗೂ ಬಾಬರ್ ಆಝಮ್(26 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಆಸ್ಟ್ರೇಲಿಯದ ಪರ ಕಮಿನ್ಸ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಮಿಚೆಲ್ ಸ್ಟಾರ್ಕ್(2-75)ಎರಡು ವಿಕೆಟ್ ಪಡೆದರು. ಮಿಚೆಲ್ ಮಾರ್ಷ್(1-27), ಹೇಝಲ್ವುಡ್(1-65) ಹಾಗೂ ನಾಥನ್ ಲಿಯೊನ್(1-74) ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ತಂಡ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ತನ್ನ 112ನೇ ಹಾಗೂ ಕೊನೆಯ ಪಂದ್ಯ ಆಡುತ್ತಿರುವ ಡೇವಿಡ್ ವಾರ್ನರ್ ದಿನದ ಅಂತಿಮ ಓವರ್ ಎದುರಿಸಿ ಔಟಾಗದೆ 6 ರನ್ ಗಳಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ರನ್ ಖಾತೆ ತೆರೆದಿಲ್ಲ
ಆಸ್ಟ್ರೇಲಿಯವು ಬೆಳಗ್ಗಿನ ಅವಧಿಯಲ್ಲಿ ಪ್ರಾಬಲ್ಯ ಮೆರೆದು ದಿನದಾಟವನ್ನು ಭರ್ಜರಿಯಾಗಿ ಆರಂಭಿಸಿತ್ತು. ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟರ್ ಗಳನ್ನು ಬೇಗನೆ ಪೆವಿಲಿಯನ್ ಗೆ ಕಳುಹಿಸಿತು. ಆರಂಭಿಕ ಬ್ಯಾಟರ್ ಗಳಾದ ಅಬ್ದುಲ್ಲಾ ಶಫೀಕ್ ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಸೈಮ್ ಅಯ್ಯೂಬ್ ಶೂನ್ಯಕ್ಕೆ ಔಟಾದರು.
ರಿಝ್ವಾನ್, ಸಲ್ಮಾನ್ ಹಾಗೂ ಜಮಾಲ್ ಪಾಕಿಸ್ತಾನದ ಇನಿಂಗ್ಸ್ ಗೆ ಶಕ್ತಿ ತುಂಬಿದರು.
ಈಗಾಗಲೇ ಮೆಲ್ಬರ್ನ್ನಲ್ಲಿ ಮೂರು ಪಂದ್ಯಗಳ ಸರಣಿಯನ್ನು ಜಯಿಸಿರುವ ಆಸ್ಟ್ರೇಲಿಯ ತಂಡ ಪಾಕಿಸ್ತಾನ ತಂಡದಿಂದ ಅನಿರೀಕ್ಷಿತ ಪ್ರತಿರೋಧ ಎದುರಿಸಿತು. ಸಿಡ್ನಿ ಟೆಸ್ಟ್ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಗುವ ಭರವಸೆ ಮೂಡಿಸಿದೆ.