ಚುನಾವಣಾ ಬಾಂಡ್ ವಿವರಗಳ ಕುರಿತು ಖುಷಿಪಡುತ್ತಿರುವವರು ಮುಂದೆ ವಿಷಾದಿಸಲಿದ್ದಾರೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಚುನಾವಣಾ ಬಾಂಡ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದರಿಂದ ತಮ್ಮ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂಬ ವಾದವನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ. “ಯಾವುದೇ ವ್ಯವಸ್ಥೆ ಪರಿಪೂರ್ಣವಲ್ಲ ಹಾಗೂ ಲೋಪವನ್ನು ಸುಧಾರಿಸಬಹುದಾಗಿದೆ,” ಎಂದು ಅವರು ಹೇಳಿದ್ದಾರಲ್ಲದೆ ಚುನಾವಣಾ ಬಾಂಡ್ ರದ್ದತಿ ವಿಚಾರವನ್ನು ಮುಂದಿಟ್ಟುಕೊಂಡು ಖುಷಿಪಡುತ್ತಿರುವವರು ಮುಂದೆ ವಿಷಾದಿಸಲಿದ್ದಾರೆ ಎಂದರು.
“ಅದನ್ನು ಹಿನ್ನಡೆ ಎಂದು ತಿಳಿಯಲು ನಾವೇನು ಮಾಡಿದ್ದೇವೆ ಎಂದು ಹೇಳಿ. ಬಾಂಡ್ ವಿವರಗಳನ್ನು ಮುಂದಿಟ್ಟುಕೊಂಡು ಖುಷಿಪಡುತ್ತಿರುವವರು ಖಂಡಿತಾ ಮುಂದೆ ವಿಷಾದಿಸಲಿದ್ದಾರೆ,” ಎಂದು ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಹೇಳಿದರು.
ತಮ್ಮ ಸರ್ಕಾರ ಜಾರಿಗೆ ತಂದ ಚುನಾವಣಾ ಬಾಂಡ್ ವ್ಯವಸ್ಥೆಯಿಂದಾಗಿ ಹಣದ ಮೂಲ ಹಾಗೂ ಅದರ ಫಲಾನುಭವಿಗಳ ವಿವರ ಇಂದು ತಿಳಿಯಲು ಸಾಧ್ಯವಾಗಿದ್ದರೆ ಅದು ಬಾಂಡ್‌ಗಳಿಂದಾಗಿ ಎಂದು ಹೇಳಿದ ಪ್ರಧಾನಿ, 2014 ಗಿಂತ ಮಂಚೆ ದೇಣಿಗೆ ನೀಡಿದವರ ಮೂಲ ಹಾಗೂ ಫಲಾನುಭವಿಗಳ ಮಾಹಿತಿ ದೊರಕಬಹುದೇ ಎಂದು ಪ್ರಶ್ನಿಸಿದರು.
“ನಾನು ರಾಜಕಾರಣಿ ಎಂಬ ಮಾತ್ರಕ್ಕೆ ನಾನು ಚುನಾವಣೆ ಗೆಲ್ಲಲು ಮಾತ್ರ ಕೆಲಸ ಮಾಡುತ್ತೇನೆಂದು ಅರ್ಥವಲ್ಲ. ತಮಿಳುನಾಡಿನ ಸಾಮರ್ಥ್ಯ ಬಹಳಷ್ಟಿದೆ ಅದು ಪೋಲಾಗಬಾರದು. ಕಳೆದ 10 ವರ್ಷಗಳಲ್ಲಿ ನಾವು ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಈ ಬಾರಿ ಬಿಜೆಪಿ-ಎನ್‌ಡಿಎ ಬೆಂಬಲಿಸಲು ತಮಿಳುನಾಡು ನಿರ್ಧರಿಸಿದೆ,” ಎಂದು ಪ್ರಧಾನಿ ಹೇಳಿದರು.
“ತಮಿಳು ಭಾಷೆಯ ರಾಜಕೀಕರಣ ತಮಿಳುನಾಡಿಗೆ ಮಾತ್ರವಲ್ಲ ದೇಶಕ್ಕೂ ಒಳ್ಳೆಯದಲ್ಲ,” ಎಂದು ಅವರು ಹೇಳಿದರು.