ತ್ರಿಪುರಾ: ಗುಂಪು ಘರ್ಷಣೆಯಲ್ಲಿ ಗಾಯಗೊಂಡ ಯುವಕ ಸಾವು

Update: 2024-07-13 16:23 GMT

PC : PTI 

ಅಗರ್ತಲಾ: ಗುಂಪು ಘರ್ಷಣೆಯಲ್ಲಿ ಬುಡಕಟ್ಟು ಯುವಕನೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ತ್ರಿಪುರಾದ ಧಲಾಯಿ ಜಿಲ್ಲೆಯಲ್ಲಿ ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಮನೆಗಳಿಗೆ ಹಾನಿ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಧಲಾಯಿ ಜಿಲ್ಲೆಯ ಗಂಡಟ್ವಿಸಾದಲ್ಲಿ ಜುಲೈ 7ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿ ಇಲ್ಲಿನ ಜಿಬಿಪಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.

ಅನಂತರ ಶುಕ್ರವಾರ ಅಂಗಡಿಗಳಿಗೆ ಬೆಂಕಿ ಹಚ್ಚಲು ಹಾಗೂ ಮನೆಗಳಿಗೆ ಹಾನಿ ಉಂಟು ಮಾಡಲು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, ಇಂಟರ್‌ನೆಟ್ ಸೇವೆ ರದ್ದುಗೊಳಿಸಲಾಗಿದೆ. ಯುವಕನ ಸಾವಿಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಥ ಯಾತ್ರೆಯ ದಿನದಂದು ಆಯೋಜಿಸಲಾಗಿದ್ದ ಮೇಳದಲ್ಲಿ ಪಾಲ್ಗೊಳ್ಳಲು ಪರಮೇಶ್ವರ್ ರಿಯಾಂಗ್ ತನ್ನ ಗೆಳೆಯರೊಂದಿಗೆ ಗಂಡಟ್ವಿಸಾ ಮಾರುಕಟ್ಟೆಗೆ ಭೇಟಿ ನೀಡಿದ್ದ. ಈ ಸಂದರ್ಭ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಘರ್ಷಣೆಯಲ್ಲಿ ರಿಯಾಂಗ್‌ಗೆ ಕೂಡ ಗಂಭೀರ ಗಾಯಗೊಂಡ. ಆತನನ್ನು ಆರಂಭದಲ್ಲಿ ಗಂಡಟ್ವಿಸಾ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಆರೋಗ್ಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟ ಕಾರಣ ಅಲ್ಲಿಂದ ಜಿಬಿಪಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆತ ಶುಕ್ರವಾರ ಮೃತಪಟ್ಟ’’ ಎಂದು ಧಲಾಯಿ ಎಸ್‌ಪಿ ಅವಿನಾಶ್ ರಾಯ್ ತಿಳಿಸಿದ್ದಾರೆ.

‘‘ರಿಯಾಂಗ್‌ನ ಮೃತದೇಹವನ್ನು ಗಂಡಟ್ವಿಸಾಕ್ಕೆ ತಂದ ಬಳಿಕ ಜನರು ಉದ್ರಿಕ್ತರಾದರು. ಆಕ್ರೋಶದಿಂದ ಕೆಲವು ಮನೆ ಹಾಗೂ ಅಂಗಡಿಗಳಿಗೆ ಹಾನಿ ಉಂಟು ಮಾಡಿದರು. ರಿಯಾಂಗ್‌ನ ಹತ್ಯೆಗೆ ಸಂಬಂಧಿಸಿ ನಾವು ನಾಲ್ವರನ್ನು ಬಂಧಿಸಿದ್ದೇವೆ. ಗಂಡಟ್ವಿಸಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಹಿತಕರ ಘಟನೆಗಳನ್ನು ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.

ಉದ್ವಿಗ್ನತೆ ಶಮನಗೊಳಿಸುವ ಉದ್ದೇಶದಿಂದ ಗಂಡಟ್ವಿಸಾದ ಎಸ್‌ಡಿಎಂ ಸಭೆ ಆಯೋಜಿಸಿದ್ದಾರೆ. ಪ್ರಸಕ್ತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾಯ್ ತಿಳಿಸಿದ್ದಾರೆ.

ರಿಯಾಂಗ್ ಹತ್ಯೆಯನ್ನು ತಿಪ್ರಾ ಮೋಥಾ ನಾಯಕ ಪ್ರದ್ಯೋತ್ ಕಿಶೋರ್ ಮಾಣಿಕ್ಯ ಖಂಡಿಸಿದ್ದಾರೆ. ‘‘ಗಂಡಟ್ವಿಸಾದಲ್ಲಿ ಪರಮೇಶ್ವರ್ ರಿಯಾಂಗ್‌ನ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹತ್ಯೆ ಆರೋಪಿಗಳ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ನಾನು ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದೇನೆ. ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ. ಪ್ರತಿಯೊಬ್ಬರು ಸಂಯಮ ಕಾಪಾಡುವಂತೆ ಕೋರುತ್ತೇನೆ’’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News